ನವದೆಹಲಿ: ಬ್ಯಾಂಕ್ ಸಾಲ ಸೇರಿದಂತೆ ವಿವಿಧ ರೀತಿಯ ಇಎಂಐ ಪಾವತಿದಾರರಿಗೆ ಸುಪ್ರೀಂ ಕೋರ್ಟ್ ಇಂದು ಸಿಹಿ ಸುದ್ದಿನೀಡಿದೆ.
ಸಾಲ ಮರುಪಾವತಿ ಮಾಡುವ ಅವಧಿಯನ್ನು ಮುಂದೂಡಿಕೆ ಮಾಡಿ ಸಾಲಗಾರರ ಹೊರೆಯನ್ನು ಸುಪ್ರೀಂ ಕೋರ್ಟ್ ಇಳಿಸಿದೆ.
ಈ ವರ್ಷದ ಆ.31 ರವರೆಗೆ ವಸೂಲಾಗದ ಸಾಲ ಎಂದು ಘೋಷಿಸಿಲ್ಲದ ಸಾಲ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್ ಪಿಎ ಆಗಿ ಘೋಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇದು ಕೊರೊನಾದಿಂದ ಸಂಕಷ್ಟದಲ್ಲಿರುವ ಸಾಲಗಾರರಿಗೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕೋವಿಡ್ ಪಿಡುಗಿನಿಂದಾದ ಆರ್ಥಿಕ ಸಂಕಷ್ಟದ ಕಾರಣಕ್ಕೆ ಸಾಲ ಮರುಪಾವತಿಯನ್ನು ಮುಂದೂಡಲಾಗಿತ್ತು. ಈ ಅವಧಿಯ ಬಡ್ಡಿ ಮನ್ನಾ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ನಡೆಸಿತು.
ಕನಿಷ್ಠ ಎರಡು ತಿಂಗಳಿಗೆ ಯಾವುದೇ ಖಾತೆಯನ್ನು ಎನ್ಪಿಎ ಆಗಿ ಘೋಷಿಸಲಾಗುವುದಿಲ್ಲ ಎಂದು ಬ್ಯಾಂಕುಗಳ ಸಂಘದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿಕೆ ನೀಡಿದರು. ಆ ಬಳಿಕ, ಆ. 31ರವರೆಗೆ ಎನ್ಪಿಎ ಆಗಿಲ್ಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್ಪಿಎಯಾಗಿ ಘೋಷಿಸಬಾರದು ಎಂದು ಪೀಠವು ನಿರ್ದೇಶನ ಕೊಟ್ಟಿತು.
ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ನಮ್ಮ ಕಾಳಜಿಯ ವಿಷಯವಾಗಿದೆ’ ಎಂದು ಪೀಠ ಹೇಳಿದೆ. ಈ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ವಿಚಾರಣೆಯನ್ನು ಸೆ. 10ಕ್ಕೆ ಮುಂದೂಡಲಾಗಿದೆ.