ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಟಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಅವರ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂದ್ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ಅಧಿಕಾರಿಗಳು ಇಂದು ರಾತ್ರಿ ಬಂಧಿಸಿದ್ದಾರೆ.
ಇವಬ್ಬರಿಗೆ ಡ್ರಗ್ಸ್ ಪೆಡ್ಲರ್ ಜತೆಗೆ ಸಂಪರ್ಕ ಇರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.
ಎನ್ಸಿಬಿ ತಂಡವು ಇಂದು ಬೆಳಿಗ್ಗೆ 6.30 ರಿಂದ ಸಾಂತಕ್ರೂಸ್ನಲ್ಲಿರುವ ಶೌವಿಕ್ ಮನೆ ಮತ್ತು ಅಂಧೇರಿಯಲ್ಲಿರುವ ಮಿರಾಂದ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಶೋಧದ ವೇಳೆ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಹಾಗೆಯೇ ಅಧಿಕಾರಿಗಳು ಈ ಇಬ್ಬರು ವಶಕ್ಕೆ ಪಡೆದು, ಮುಂಬೈನ ಎನ್ ಸಿಬಿ ಕಚೇರಿಯಲ್ಲಿ ಸತತ ಏಳು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇವರಿಗೆ ಡ್ರಗ್ಸ್ ಪೆಡ್ಲರ್ ಜತೆ ಸಂಪರ್ಕ ಇರುವುದು ದೃಢಪಟ್ಟಿದೆ. ಇದಕ್ಕೆ ಸಂಬಂಧಿಸಿದ ದಾಖಲೆ, ಸಾಕ್ಷ್ಯಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಈ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಸುಶಾಂತ್ ಸಾವಿನ ಪ್ರಕರಣದ ಮಾದಕವಸ್ತು ಆಯಾಮದಲ್ಲಿ ಈಗಾಗಲೇ ಮಹಾರಾಷ್ಟ್ರದಲ್ಲಿ ಇಬ್ಬರು ಶಂಕಿತ ಡ್ರಗ್ ಸರಬರಾಜುದಾರರು ಸೇರಿದಂತೆ ಮೂವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.