ಬೆಂಗಳೂರು: ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದ ಡ್ರಗ್ಸ್ ಜಾಲದ ಕಿಂಗ್ ಪಿನ್ ಗಳು ಪೊಲೀಸರ ಖೆಡ್ಡಾಕ್ಕೆ ಬೀಳುತ್ತಿದ್ದಂತೆ ಕೆಲ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರು, ಸಂಗೀತ ನಿರ್ದೇಶಕರು ಹಾಗೂ ಡ್ಯಾನ್ಸರ್ ಗಳ ಕರಾಳಮುಖ ಬಹಿರಂಗ ಆಗುತ್ತಿದೆ.
ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್ಸಿಬಿ) ಅಧಿಕಾರಿಗಳು ಡ್ರಗ್ಸ್ ಕಿಂಗ್ ಪಿನ್ ಗಳಾದ ಡಿ. ಅನಿಕಾ, ಮೊಹಮ್ಮದ್ ಅನೂಪ ಹಾಗೂ ರಾಜೇಶ್ ರವೀಂದ್ರನ್ ಎಂಬುವವರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಸ್ಯಾಂಡಲ್ ವುಡ್ ನ ಕರಾಳಮುಖ ಒಂದೊಂದಾಗಿ ಕಳಚಿ ಬೀಳುತ್ತಿದೆ. ಸ್ಟಾರ್ ನಟರು, ನಟಿಯರು ಹಾಗೂ ಸಂಗೀತ ನಿರ್ದೇಶಕರು ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿದ್ದರು ಎಂಬ ಸುದ್ದಿ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಡ್ರಗ್ಸ್ ಬಲೆಯಲ್ಲಿ ಪ್ರಸಿದ್ಧ ಮ್ಯೂಜಿಸಿನ್:
ಡ್ರಗ್ಸ್ ಬಲೆಯಲ್ಲಿ ಕನ್ನಡ ಸೇರಿ ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕರೊಬ್ಬರು ಸಿಲುಕಿಕೊಂಡಿದ್ದು, ಇದು ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಸಂಗೀತ ನಿರ್ದೇಶಕನ ಸ್ಟೇಜ್ ಶೋಗೆ ವಿದೇಶದಲ್ಲೂ ಬೇಡಿಕೆ ಇದೆ. ಈತ ಫೇಮಸ್ ಮ್ಯೂಜಿಸಿನ್ ಕೂಡ ಹೌದು. ಆದರೆ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಈತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಸ್ಟಾರ್ ನಟ ಕೂಡ ಭಾಗಿ:
ಎನ್ ಸಿಬಿ ಅಧಿಕಾರಿಗಳ ಎರಡನೇ ಟಾರ್ಗೆಟ್ ಕನ್ನಡದ ಸ್ಟಾರ್ ನಟ. ಈತ ಕರ್ನಾಟಕದ ಪತ್ರಕರ್ತನ ಸಂಬಂಧಿಯೂ ಆಗಿದ್ದಾನೆ. ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ನಟ ಅಧಿಕಾರಿಗಳ ಮೂರನೇ ಟಾರ್ಗೆಟ್ ಆಗಿದ್ದಾರೆ. ಹಾಗೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ಡ್ಯಾನ್ಸರ್ ಮತ್ತೊಬ್ಬ ಗ್ರಾಹಕ. ಈತ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತುಸಿಕೊಂಡಿರುವ ಡ್ಯಾನ್ಸರ್ ಕೂಡ ಆಗಿದ್ದಾನೆ. ಟಿಕ್ ಟಾಕ್, ಇನ್ ಸ್ಟಾಗ್ರಾಮ್ ಸ್ಟಾರ್ ಕೂಡ ಗ್ರಾಹಕ ಆಗಿದ್ದನು ಎಂದು ಮೂಲಗಳಿಂದ ತಿಳಿದುಬಂದಿದೆ.
ಉದಯೋನ್ಮುಖ ತಾರೆಯರು ಡ್ರಗ್ಸ್ ಕಿಂಗ್ ಪಿನ್ ಅನಿಕಾಳ ಗಿರಾಕಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರದಲ್ಲಿ ನಟಿಸಿದ್ದ ನಟಿಗೂ ಜಾಲದ ನಂಟಿದೆ. ಈಕೆ ಸಂಪೂರ್ಣ ನಟಿ ಆಗಿಲ್ಲ, ಮಾಡೆಲ್ ಕೂಡ ಅಲ್ಲ. ಕನ್ನಡದ ಮೋಸ್ಟ್ ವಿವಾದಾತ್ಮಕ ನಟಿ ಕೂಡ ಈಕೆ. ಕನ್ನಡ ಸಿನಿಮಾ ಕಾರ್ಯದಲ್ಲೂ ಈಕೆ ಬ್ಯುಸಿಯಾಗಿದ್ದಾಳೆ. ಈಕೆ ಕನ್ನಡ ಚಿತ್ರರಂಗದ ಪ್ರಸಿದ್ಧ ಕುಟುಂಬದವಳು ಎಂದು ಹೇಳಲಾಗುತ್ತಿದೆ.
ಎನ್ ಸಿಬಿ ಅಧಿಕಾರಿಗಳ ತನಿಖೆ ಪ್ರಗತಿಯಲ್ಲಿದ್ದು, ಈ ಜಾಲದಲ್ಲಿ ತೊಡಗಿರುವ ಸ್ಯಾಂಡಲ್ ವುಡ್ ನ ಇನ್ನಷ್ಟು ನಟ ನಟಿಯರ ಮುಖವಾಡ ಬಯಲಾಗುವ ಸಾಧ್ಯತೆ ಇದೆ.