ಎಸ್ ಡಿಪಿಐ ನಿಷೇಧದ ಬಗ್ಗೆ ತೀರ್ಮಾನ ಆಗಿಲ್ಲ: ಕೇಂದ್ರಕ್ಕೆ ಶಿಫಾರಸು ಮಾಡುವ ಮೊದಲು ದಾಖಲೆ ಸಂಗ್ರಹ- ಸಚಿವ ಮಾಧುಸ್ವಾಮಿ

ಬೆಂಗಳೂರು: ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳ ನಿಷೇಧದ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ. ಈ ಎರಡು ಸಂಘಟನೆಗಳ ನಿಷೇಧಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೊದಲು ಅಗತ್ಯ ದಾಖಲೆಗಳ ಸಂಗ್ರಹ ಮಾಡಬೇಕಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಸ್ ಡಿಪಿಐ, ಪಿಎಫ್ ಐ ಸಂಘಟನೆಯ ನಿಷೇಧಕ್ಕೆ ಸಂಬಂಧಿಸಿ ಇಂದು ರಾಜ್ಯ ಗೃಹ ಇಲಾಖೆಯಿಂದ ಅಗತ್ಯ ಮಾಹಿತಿ ತರಿಸಿಕೊಂಡು ಚರ್ಚೆ ನಡೆಸಿದ್ದೇವೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ವರದಿ ಬಾರದ ಹಿನ್ನೆಲೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಿಷೇಧ ಶಿಫಾರಸು ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ ಎಂದರು.

ಎಸ್ ಡಿಪಿಐ ರಾಜಕೀಯ ಪಕ್ಷ ಆಗಿರುವುದರಿಂದ ಯಾವ ಕಾನೂನಿನಡಿಯಲ್ಲಿ ನಿಷೇಧ ಮಾಡಲು ಅವಕಾಶ ಇದೆ ಎಂಬುವುದರ ಬಗ್ಗೆ ಚರ್ಚಿಸಿದ್ದೇವೆ. ಅಲ್ಲದೆ, ಸದ್ಯ ಇರುವ ಕಾನೂನಿನ ಅಡಿಯಲ್ಲಿಯೇ ಕ್ರಮ ಕೈಗೊಳ್ಳಬಹುದೇ ಅಥವಾ ಕಾನೂನಿಗೆ ತಿದ್ದುಪಡಿ ತರಬೇಕೇ ಎನ್ನುವುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.