ಸುಶಾಂತ್ ಸಿಂಗ್‌ ಸಾವಿನ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ದೆಹಲಿ: ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಸುಶಾಂತ್ ಸಾವಿನ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ.

ಸುಪ್ರೀಂ ಆದೇಶದಿಂದಾಗಿ ಬಹುತೇಕ ಜನರು ಖುಷಿಗೊಂಡಿದ್ದು, ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಅವರು ದೇವರಿಗೆ ಧನ್ಯವಾದಗಳು! ನಮ್ಮ ಪ್ರಾರ್ಥನೆಗೆ ನೀವು ಉತ್ತರಿಸಿದ್ದೀರಿ!! ಆದರೆ ಇದು ಕೇವಲ ಆರಂಭ… ಸತ್ಯದತ್ತ ಮೊದಲ ಹೆಜ್ಜೆ! ಸಿಬಿಐ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದು ಟ್ವೀಟಿಸಿದ್ದಾರೆ. ಸುಪ್ರೀಂ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ, ‘ಜೈ ಹೋ ಸಿಬಿಐ’ ಎಂದಿದ್ದಾರೆ.

ಬಾಲಿವುಡ್‌ ನಟಿ ಕಂಗನಾ ರಣಾವತ್ ಇದು ಮಾನವೀಯತೆಯ ಗೆಲುವು ಎಂದು ಟ್ವೀಟ್ ಮಾಡಿದ್ದಾರೆ. ಕಂಗನಾ ಕೂಡ ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ ಎಂದು ಹೋರಾಟ ಮಾಡಿದ್ದರು.