ಬೆಂಗಳೂರು ಗಲಭೆ ಪೂರ್ವಯೋಜಿತ ಕೃತ್ಯ: ಎಸ್‍ ಡಿಪಿಐ, ಕೆಎಫ್ ಡಿ ಸಂಘಟನೆ ನಿಷೇಧಿಸಬೇಕು: ನಳಿನ್

ಕೊಪ್ಪಳ: ಬೆಂಗಳೂರಿನ‌ ಡಿಜೆ ಹಳ್ಳಿಯ ಗಲಭೆ ಪೂರ್ವ ಯೋಜಿತ ಕೃತ್ಯ. ಈ ಗಲಭೆಯಲ್ಲಿ ಎಸ್‍ಡಿಪಿಐ, ಕೆಎಫ್‍ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳಿದ್ದು, ಇವುಗಳನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ವಿರೋಧವಿದೆ. ಅಂತವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುತ್ತದೆ. ಆದರೆ ಗಲಭೆ, ಸಾವರ್ಜನಿಕ ಆಸ್ತಿಪಾಸ್ತಿ ಹಾನಿ ಸರಿಯ? ಏಕಾಏಕಿ ಜನರು ಹೇಗೆ ಸೇರಿದರು, ಪೆಟ್ರೋಲ್ ಬಾಂಬ್‍ಗಳು, ಕಲ್ಲುಗಳು ಎಲ್ಲಿಂದ ಬಂದವು ಪ್ರಶ್ನಿಸಿದರು. ಇದರ ಹಿಂದೆ ಯಾರ್ಯಾರು ಇದ್ದಾರೆ ತನಿಖೆ ಆಗಬೇಕೆಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಕುರಿತು ಮಾತನಾಡಿದ ನಳಿನ್, ಸಿದ್ದು ಆಡಳಿತದಲ್ಲಿ‌ 21 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಕ್ರಮ ತಗೆದುಕೊಳ್ಳಲಿಲ್ಲ. ಎಸ್‍ಡಿಪಿಐ, ಸಿಮಿ ಸಂಘಟನೆಯವರ ಮೇಲಿನ ಕೇಸ್ ಗಳಿಗೆ ಬಿ ರಿಪೋರ್ಟ್ ಹಾಕಿದರು. ಇದೆಲ್ಲವೂ‌ ಅವರನ್ನು ಈ‌ ಕೆಲಸ ಮಾಡಿಸುತ್ತಿದೆ ಎಂದರು.