ರಾಜಸ್ತಾನ ಕಾಂಗ್ರೆಸ್ ಬಿಕ್ಕಟ್ಟು ಶಮನ: ಕಾಂಗ್ರೆಸ್ ನಲ್ಲೇ ಮುಂದುವರಿಯಲು ಸಚಿನ್ ಪೈಲಟ್ ನಿರ್ಧಾರ

ನವದೆಹಲಿ: ರಾಜಸ್ತಾನ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಬಹುತೇಕ ಬಗೆಹರಿದ್ದು, ಇಂದು ಸೋನಿಯಾ ಗಾಂಧಿ ನಿವಾಸದಲ್ಲಿ ಸಚಿನ್ ಪೈಲಟ್ ಹಾಗೂ ಬಂಡಾಯ ಶಾಸಕರ ಜತೆ ನಡೆದ ಸಂದಾನ ಸಭೆ ಯಶಸ್ವಿಯಾಗಿದೆ. ಆ ಮೂಲಕ ರಾಜಸ್ತಾನ ಕಾಂಗ್ರೆಸ್ ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿದೆ.
ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಸಚಿನ್ ಪೈಲಟ್ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜತೆಗೆ ಚರ್ಚೆ ನಡೆಸಿದರು.
ಈ ವೇಳೆ ಪೈಲಟ್ ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. ಪೈಲಟ್ ಸಮಸ್ಯೆ ಬಗೆಹರಿಸಲು ಎಐಸಿಸಿಯಿಂದ ಮೂವರು ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಬಗೆಹರಿಸಿ ತೀರ್ಮಾನಿಸಲಿದೆ.
ಪೈಲಟ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ರಾಹುಲ್ ಹಾಗೂ ಪ್ರಿಯಾಂಕ ಆಸಕ್ತಿ ತೋರಿದ್ದಾರೆ. ಮತ್ತೆ ಪೈಲಟ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ರಾಜಸ್ತಾನ  ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನೀಡುವ ಸಾಧ್ಯತೆ ಇದೆ. ಹಾಗೆ ವಜಾಗೊಂಡ ಸಚಿವರಿಗೂ ಮತ್ತೆ ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೈಲಟ್, ರಾಜಸ್ತಾನ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ವಿಘ್ನ ಇಲ್ಲ. ಎಲ್ಲ ಸಮಸ್ಯೆ ಹಾಗೂ ಗೊಂದಲಗಳನ್ನು ಬಗೆಹರಿಸುವುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ. ನಾವೆಲ್ಲ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸುತ್ತೇವೆ ಎಂದು ಹೇಳಿದ್ದಾರೆ.