ಸಾಮಾಜಿಕ ಜಾಲತಾಣದಲ್ಲಿ ಕಣ್ಮನ ಗೆದ್ದು, ಎಲ್ಲರ ಹೃದಯ ಕದ್ದ ಈ “ನೀಲ ಮೇಘ ಶ್ಯಾಮ” ಯಾರ್ ಗೊತ್ತಾ?

ಈ ನೀಲ ಮೇಘ ಶ್ಯಾಮನನ್ನು ನೋಡುತ್ತಿದ್ದರೆ ಆಹಾ ಅದೆಷ್ಟು ಚಂದ ಇದ್ದಾನೆ. ಕೃಷ್ಣನೆಂದರೆ ನಿಜಕ್ಕೂ ಹೀಗೇ ಇರಬಹುದೇನೋ ಅನ್ನಿಸಿಬಿಡುತ್ತದೆ. ಈ ಕೃಷ್ಣನ ನೀಲಿ ಬಣ್ಣಕ್ಕೆ ಕಣ್ಣು ಮನಸೋತುಬಿಡುತ್ತದೆ. ಅವನ ಮೊಗದಲ್ಲಿರೋ ಹೂ ನಗುವಿಗೆ ಮೈಮನಸ್ಸು ಥ್ರಿಲ್ಲ್ ಆಗಿಬಿಡುತ್ತದೆ.

ಹೌದಪ್ಪ ಹೌದು, ಈ ಕೃಷ್ಣನ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ, ನೀಲ ಮೇಘಶ್ಯಾಮ ಎಲ್ಲರ ಹೃದಯ ಗೆದ್ದಾಗಿದೆ.ಕಣ್ಣು ಕದ್ದಾಗಿದೆ.

ಅಂದ ಹಾಗೇ ಈ ನೀಲ ಮೇಘ ಶ್ಯಾಮ, ಬೇರ್ಯಾರೂ ಅಲ್ಲ, ಮಂಗಳೂರಿನ ವಕೀಲೆ, ಖ್ಯಾತ ನಿರೂಪಕಿ, ದೇಯಿಬೈದೆದಿ ತುಳು ಸಿನಿಮಾದ ಬೈದೆದಿ ಪಾತ್ರದಾರಿ, ಜೇಸಿ ಇಂಡಿಯಾದ ಝೋನ್ ವೈಸ್ ಪ್ರೆಸಿಡೆಂಟ್ , ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮನಗೆದ್ದ ಸೌಜನ್ಯ ಹೆಗ್ಡೆ.

ಈ ಸಲ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಏನಾದ್ರೂ ಹೊಸ ಪ್ರಯೋಗ ಮಾಡಬೇಕು ಎಂದು ಅನ್ನಿಸಿದಾಗ ಸೌಜನ್ಯ ಹೆಗ್ಡೆ ಅವರಿಗೆ ನೆನಪಾಗಿದ್ದು ಬಾಲ್ಯದಲ್ಲಿ ತಾನು ಹಾಕುತ್ತಿದ್ದ ಶ್ರೀ ಕೃಷ್ಣ ವೇಷ. ಆ ವೇಷ ಹಾಕಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ನೆನಪಾಗಿ, ಇದೀಗ ದೊಡ್ಡವಳಾದರೇನಂತೆ, ಶ್ರೀ ಕೃಷ್ಣ ಬದುಕಿಗೆ ಯಾವತ್ತೂ ಜೋಶ್ ಎಂತಂದುಕೊಂಡು ವಿಭಿನ್ನವಾಗಿ ಶ್ರೀ ಕೃಷ್ಣ ವೇಷ ತೊಡುವ ನಿರ್ಧಾರ ಮಾಡಿದರು.ಇವರ ತಂಡವೂ ಇವರ ಜೋಶ್ ಗೆ ಇನ್ನಷ್ಟು ಜೋಶ್ ನೀಡಿತು.

ಸೌಜನ್ಯ ಅವರ ಈ ಯೋಚನೆಗೆ ವಿನ್ಯಾಸಕಿ ಪ್ರಿಯಾ ಬಾಳಿಗ ತಮ್ಮದೇ ಒಂದು ವಿಭಿನ್ನ ಪರಿಕಲ್ಪನೆಯಲ್ಲಿ “ನೀಲ ಕೃಷ್ಣ” ಮಾಡೆಲ್ ಮಾಡಿದರೆ ಹೇಗೆ ಎಂದು ಯೋಚಿಸಿ ಅದನ್ನು ತಮ್ಮ ಬಣ್ಣದ ಕೈಗಳಲ್ಲಿ ಮಾಡಿಯೇ ಬಿಟ್ಟರು. ಕೆಲವೇ ಕ್ಷಣಗಳಲ್ಲಿ ಸೌಜನ್ಯ, “ನೀಲ ಕೃಷ್ಣನಾದರು.” ಈ ಚೆಂದದ ನೀಲಕೃಷ್ಣನನ್ನು ಗೋಲ್ಡ್ ಸಂತೋಷ್ ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದರು.

 

ಕೆಲವೇ ಕ್ಷಣಗಳಲ್ಲಿ ಈ ನೀಲ ಮೇಘಶ್ಯಾಮನ ಸುಂದರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಯ್ಸಾಪ್ ಡಿಪಿ ಗಳಲ್ಲಿ ಸೆಟ್ಟೇರಿಬಿಟ್ಟಿತು.

ವಿನ್ಯಾಸಕಿ ಪ್ರಿಯಾಬಾಳಿಗ
ಗೋಲ್ಡ್ ಸಂತೋಷ್

‘ಅಷ್ಟಮಿಗೆ ಹೀಗೊಂದು ಕೃಷ್ಣನಾದರೆ ಹೇಗೆ ಎನ್ನುವ ಯೋಚನೆಯಲ್ಲಿ ಈ ಪ್ರಯೋಗ ಮಾಡಿದ್ದೇವೆ. ಈ ಫೋಟೋಗಳನ್ನು ಸ್ನೇಹಿತರು ಮೆಚ್ಚಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಬೆಂಬಲಿಸಿದ್ದಾರೆ.ಇದಕ್ಕೋಸ್ಕರ ಖುಷಿ ಇದೆ “ಎಂದು ಉಡುಪಿxpress ಜೊತೆ ತಮ್ಮ ಸಂತಸ ಹಂಚಿಕೊಂಡರು ಸೌಜನ್ಯಾ ಹೆಗಡೆ.