ಅಯೋಧ್ಯೆ ರಾಮಮಂದಿರ ಶಿಲಾನ್ಯಾಸದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗೋಣ : ಯಶ್ ಪಾಲ್ ಸುವರ್ಣ

ಉಡುಪಿ: ಭಾರತೀಯರ ಬಹು ಶತಮಾನಗಳ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಸಾಕಾರವಾಗುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಗಳಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಲಕ್ಷಾಂತರ ಕರಸೇವಕರ ತ್ಯಾಗ ಬಲಿದಾನದೊಂದಿಗೆ, ಶ್ರೀ ಆಟಲ್ ಬಿಹಾರಿ ವಾಜಪೇಯಿ,ಲಾಲ್ ಕೃಷ್ಣ ಅಡ್ವಾಣಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್, ಉಮಾ ಭಾರತಿ, ಮುರಳಿ ಮನೋಹರ ಜೋಶಿ ಮೊದಲಾದ ಹಲವಾರು ನಾಯಕರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಭಾರತೀಯರ ಸ್ವಾಭಿಮಾನದ ಪ್ರತೀಕವಾಗಿ ರಾಮ ಮಂದಿರದ ನಿರ್ಮಾಣ ಸಾಕಾರಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ನಾವೆಲ್ಲರೂ ಈ ಮಹಾನ್ ಕಾರ್ಯದಲ್ಲಿ ಸಮರ್ಪಿಸಿಕೊಂಡ ಎಲ್ಲಾ ನಾಯಕರು ಹಾಗೂ ಕರಸೇವಕರ ಸೇವೆಯನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸೋಣ. ನಮ್ಮ ಜೀವಿತಾವಧಿಯಲ್ಲಿ  ನಿರ್ಮಾಣಗೊಳ್ಳುತ್ತಿರುವ ಭವ್ಯ ಶ್ರೀರಾಮ ಮಂದಿರದ ಶಿಲಾನ್ಯಾಸ ಸಮಾರಂಭದ ಸಂಭ್ರಮವನ್ನು ಮನೆ ಮನಗಳಲ್ಲಿ ಆಚರಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಭಗವಧ್ವಜ ಹಾರಿಸಿ, ದೀಪವನ್ನು ಬೆಳಗುವ ಮೂಲಕ ಸ್ಮರಣಿಯವಾಗಿಸುವಂತೆ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.