ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಸಕಲ ಸಿದ್ಧತೆ: ಕಣ್ಮನ ಸೆಳೆಯತ್ತಿದೆ ಅಯೋದ್ಯೆ

ನವದೆಹಲಿ: ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದ್ದು, ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ರಾಮಮಂದಿರ ಸಂಪರ್ಕಿಸುವ ಅಯೋಧ್ಯೆಯ ಎಲ್ಲ ಪ್ರಮುಖ ರಸ್ತೆಗಳ ಬದಿಯ ಕಟ್ಟಡ, ಸೇತುವೆಯ ಕಂಬಗಳು ವಿವಿಧ ಬಣ್ಣಗಳಿಂದ ಸಿಂಗಾರಗೊಂಡಿದೆ.
ವಾರಾಣಸಿಯಿಂದ ಕರೆಸಿಕೊಳ್ಳಲಾಗಿರುವ 21 ಪುರೋಹಿತರಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯುತ್ತಿದೆ. ಅಯೋಧ್ಯೆಯ ಎಲ್ಲ ಪ್ರಮುಖ ದೇವಾಲಯಗಳಿಗೆ ದೀಪಾಲಂಕಾರ ಮಾಡಲಾಗಿದೆ.

ವಿಶೇಷ ಉಡುಪಿನ ಸಿಂಗಾರ:
ರಾಮಲಲ್ಲಾನಿಗೆ ನವರತ್ನಗಳಿಂದ ವಿಶೇಷವಾಗಿ ನಾಲ್ಕು ಉಡುಪಗಳನ್ನು ತಯಾರಿಸಲಾಗಿದ್ದು, ಅವುಗಳನ್ನು ತಾತ್ಕಾಲಿಕ ರಾಮಮಂದಿರದ ಅರ್ಚಕರಿಗೆ ಹಸ್ತಾಂತರಿಸಲಾಗಿದೆ. ಸೋಮವಾರ ಬಿಳಿ, ಮಂಗಳವಾರ ಕೆಂಪು, ಬುಧವಾರ ಹಸಿರು ಮತ್ತು ಗುರುವಾರ ಹಳದಿ ಉಡುಪನ್ನು ರಾಮಲಲ್ಲಾ ವಿಗ್ರಹಕ್ಕೆ ತೊಡಿಸಲಾಗುತ್ತದೆ.

ಹೆಚ್ಚು ಜನ ಸೇರದಂತೆ ಎಚ್ಚರ:

ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಲಾಗಿದೆ. ಸುಮಾರು 200 ಗಣ್ಯರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಪ್ರಧಾನಿ ಮೋದಿ ಅವರ ಜತೆಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ರಾಮಮಂದಿರ ಹೋರಾಟದ ನೇತೃತ್ವ ವಹಿಸಿದ್ದ, ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಮಜನ್ಮಭೂಮಿ ಬಾಬರಿ ಮಸೀದಿ ನಿವೇಶನ ವಿವಾದದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರು ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಹಿರಿಯ ನಾಯಕಿ ಉಮಾಭಾರತಿ ಅವರು ಬುಧವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಅವರು ಸರಾಯು ನದಿಯ ತಟದಲ್ಲಿಯೇ ನಿಂತು ದೇವರ ದರ್ಶನ ಮಾಡುತ್ತೇನೆಂದು ತಿಳಿಸಿದ್ದಾರೆ.