ರಾಮಮಂದಿರ ನಿರ್ಮಾಣವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಬೇಡಿ: ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್

ಉಡುಪಿ: ರಾಮಮಂದಿರ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ. ಭವ್ಯವಾದ ರಾಮಮಂದಿರ ನಿರ್ಮಾಣ ಆಗಬೇಕು. ಅದನ್ನು ಎಲ್ಲರೂ ಸ್ವಾಗತಿಸುತ್ತೇವೆ. ಆದರೆ ದೇವರ ಕೆಲಸ ಆ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರಬೇಕು. ಅದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಕೆಲಸ ಆಗಬಾರದು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದರು.

ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ಮೋದಿ ಸರ್ಕಾರ ಆರ್ಥಿಕ ನೀತಿ, ವಿದೇಶಿ ನೀತಿಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ರಾಜ್ಯಗಳನ್ನು ಒಗ್ಗೂಡಿಸಿಕೊಂಡು ದೇಶ ಮುನ್ನಡೆಸುವುದರಲ್ಲಿ ವಿಫಲವಾಗಿದೆ ಎಂದು ಆರೋಪಿದರು.

ಮೋದಿ ಸರ್ಕಾರವು ವಾಮಮಾರ್ಗದ ಮೂಲಕ ಬೇರೆ ಬೇರೆ ರಾಜ್ಯಗಳಲ್ಲಿರುವ ಸರ್ಕಾರಗಳನ್ನು ಬೀಳಿಸುವ ಕೆಲಸ ಮಾಡುತ್ತಿದೆ. ಹಿಂದುತ್ವ, ದೇಶ ಒಡೆಯುವುದನ್ನು ಬಿಟ್ಟರೆ ಮೋದಿ ಅವರು ಕಳೆದ ಆರು ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಮೋದಿ ಅವರ ಆಡಳಿತ ವೈಫ್ಯಲ್ಯದಿಂದಲೇ ಇಂದು ದೇಶ ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ದೂರಿದರು.