ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಕಂಟೈನ್ ಮೆಂಟ್ ವಲಯದಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ಹೇರಲಾಗಿದ್ದು, ಕಂಟೈನ್ ಮೆಂಟ್ ಹೊರ ವಲಯದಲ್ಲಿ ಕೆಲವೊಂದು ಚಟುವಟಿಕೆಗಳ ನಿರ್ಬಂಧಗಳನ್ನು ಸಡಿಲಗೊಳಿಸಿ, ಆಗಸ್ಟ್ 1ರಿಂದ ಅನ್ವಯವಾಗುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಕಂಟೈನ್ ಮೆಂಟ್ ವಲಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಸ್ಟ್ 31 ರವರೆಗೂ ಇರುತ್ತದೆ. ವೈದ್ಯಕೀಯ ತುರ್ತು ಸೇವೆ ಮತ್ತು ಅಗತ್ಯ ವಸ್ತು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದ್ದು, ಕಂಟೈನ್ ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನವನ್ನು ನಿಷೇಧಿಸಿದೆ.
ಶಾಲಾ-ಕಾಲೇಜು ಸದ್ಯಕ್ಕಿಲ್ಲ
ಕಂಟೈನ್ ಮೆಂಟ್ ವಲಯದ ಹೊರಗಿನ ಪ್ರದೇಶದಲ್ಲಿ ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಭೇತಿ ಸಂಸ್ಥೆಗಳು , ಆಗಸ್ಟ್ 31 ರವರೆಗೆ ತೆರೆಯಲು ಅವಕಾಶವಿಲ್ಲ. ಆನ್ ಲೈನ್ /ದೂರ ಶಿಕ್ಷಣ ಕಲಿಕೆಗಳಿಗೆ ಅನುಮತಿಯನ್ನು ಮುಂದುವರಿಸಲಾಗುವುದು.
ಸಿನಿಮಾ ಮಂದಿರ, ಈಜುಕೊಳ, ಮನೋರಂಜನಾ ಉದ್ಯಾನವನ, ಚಿತ್ರಮಂದಿರ, ಸಂಭಾಗಣ, ಅಸೆಂಬ್ಲಿ ಹಾಲ್ ಮತ್ತು ಅಂತಹುದೇ ಸ್ಥಳಗಳು, ಬಾರ್, ಪಬ್ ,ಕ್ಲಬ್, ಹಾಗೂ ನೈಟ್ ಕ್ಲಬ್ ಗಳನ್ನು ತೆರೆಯುವಂತಿಲ್ಲ.
ಸಾಮಾಜಿಕ ರಾಜಕೀಯ ಕ್ರೀಡೆ ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯ, ಮತ್ತು ಇತರೆ ಬೃಹತ್ ಸಭೆಗಳು,(ನಾಟಕ, ಯಕ್ಷಗಾನ ನಡೆಸುವಂತಿಲ್ಲ ಮತ್ತು ರಂಗ ಮಂದಿರಗಳನ್ನು ತೆರೆಯುವಂತಿಲ್ಲ.) ಯೋಗ ಕೇಂದ್ರ ಮತ್ತು ಜಿಮ್ ತೆರೆಯಲು ಆಗಸ್ಟ್ 5 ರಂದು ಅನುಮತಿ ನೀಡಲಾಗುವುದು.(ಪ್ರತ್ಯೇಕ ಎಸ್.ಓ.ಪಿ ನೀಡಲಾಗುವುದು)
ತಪ್ಪಿದರೆ ದಂಡ:
ಸಾರ್ವಜನಿಕರು ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸುವುದು. ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದು. ನಿಯಮ ಉಲ್ಲಂಘನೆಗಾಗಿ ಅಧಿಕಾರಿಗಳು ನಿಗದಿಪಡಿಸಿದ ದಂಡವನ್ನು ವಿಧಿಸಿ ,ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಗಿಯುವುದು ನಿರ್ಭಂದಿಸಿದೆ.
ವಿವಾಹ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಖಾತರಿ ಪಡಿಸಿಕೊಂಡು ಗರಿಷ್ಟ 50 ಜನರನ್ನು ಮಾತ್ರ ಆಹ್ವಾನಿಸತಕ್ಕದ್ದು, ಈ ಬಗ್ಗೆ ಕಡ್ಡಾಯವಾಗಿ ಸಂಬಂಧ ಪಟ್ಟ ತಹಶೀಲ್ದಾರರಿಂದ ಪೂರ್ವಾನುಮತಿ ಪಡೆಯಬೇಕು.
ಶವ ಸಂಸ್ಕಾರ, ಅಂತಿಮ ಯಾತ್ರೆಯ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿ, ಗರಿಷ್ಟ 20 ಜನರಿಗಿಂತ ಮೇಲೆ ಸೇರದಂತೆ ನೋಡಿಕೊಳ್ಳತಕ್ಕದ್ದು. ಬೃಹತ್ ಸಾರ್ವಜನಿಕ ಸಭೆ, ಒಟ್ಟುಗೂಡುವಿಕೆ ನಿಷೇಧವನ್ನು ಮುಂದುವರಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಇತ್ಯಾದಿ ಬಳಕೆಯನ್ನು ನಿಷೇಧಿಸಿದೆ. ಹಾಗೂ 65 ವರ್ಷ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿ, ಅಸ್ವಸ್ಥರು, ತುರ್ತು ವೈದ್ಯಕೀಯ ಕಾರಣ ಹೊರತುಪಡಿಸಿ ಮನೆಯಿಂದ ಹೊರಗೆ ಬರುವುದು ಸೂಕ್ತವಲ್ಲ.
ಕೆಲಸದ ಸ್ಥಳಕ್ಕಿಂತ ಆದಷ್ಟು ಮನೆಯಿಂದ ಕೆಲಸ ಮಾಡುವುದನ್ನು ಅನುಸರಿಸಿ, ಕೆಲಸದ ಪಾಳಿಯ ಪದ್ಧತಿ/ವ್ಯವಹಾರ ಸಮಯ ಕಚೇರಿಗಳಲ್ಲಿ, ಅಂಗಡಿ, ಮಾರುಕಟ್ಟೆ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಕೆಲಸ/ವ್ಯವಹಾರದ ಸಮಯವನ್ನು ಪಾಳಿಯ ಪದ್ಧತಿಯಂತೆ ಅನುಸರಿಸುವುದು. ಹಾಗೂ ಎಲ್ಲಾ ಸಾಮಾನ್ಯ ಪ್ರದೇಶದಲ್ಲಿ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಥರ್ಮಲ್ ಸ್ಕಾö್ಯನಿಂಗ್, ಕೈ ತೊಳೆಯುವ ಮತ್ತು ಸ್ಯಾನಿಟೈಸರ್ನ ವ್ಯವಸ್ಥೆ ಕಲ್ಪಿಸಬೇಕು.
ಕೆಲಸದ ಸ್ಥಳದಲ್ಲಿ ವ್ಯಕ್ತಿ, ಮತ್ತು ಪಾಳಿಗಳ ನಡುವೆ, ಊಟದ ವಿರಾಮ ಮೊದಲಾದ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಈ ಎಲ್ಲ ಆದೇಶಗಳನ್ನು ಪಾಲಿಸದಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.