ಪೇಜಾವರ ವಿಶ್ವಪ್ರಸನ್ನ ಶ್ರೀಪಾದರ ಮೂಲಕ ರಾಮಮಂದಿರಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ ರವಾನೆ

ಉಡುಪಿ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಲಿದ್ದು, ಈ ಪವಿತ್ರ ಶುಭಕಾರ್ಯದಲ್ಲಿ ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳ ಮಣ್ಣು ಹಾಗೂ ನೀರನ್ನು ಸಂಗ್ರಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಮೆರವಣಿಗೆಯ ಮೂಲಕ ತಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರ ಮಾಡಿದೆ.
ನೀಲಾವರದ ಗೋಶಾಲೆಯಲ್ಲಿ ಇರುವ ಪೇಜಾವರ ಮಠದ ಶಾಖಾ ಮಠದಲ್ಲಿ ನಡೆದ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಲೆಯನ್ನು ಪೇಜಾವರ ಶ್ರೀಪಾದರಿಗೆ ಹಸ್ತಾಂತರ ಮಾಡಲಾಯಿತು.
ಬಳಿಕ ಮಾತನಾಡಿದ ಶ್ರೀಪಾದರು, ಅಯೋಧ್ಯೆಯಲ್ಲಿ ನಡೆಯುವ ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮೊದಲು ಈ ಶಿಲೆಯನ್ನು ಅಯೋಧ್ಯೆಗೆ ತಲುಪಿಸುತ್ತೇನೆ ಎಂದು ಹೇಳಿದರು. ಶಿಲೆಯನ್ನು ಶಿಲಾನ್ಯಾಸಕ್ಕೆ ಅರ್ಪಿಸುವ ಮೂಲಕ ಕರ್ನಾಟಕಕ್ಕೂ ರಾಮಮಂದಿರಕ್ಕೂ ಭಾವನಾತ್ಮಕ ಸಂಬಂಧ ಬೆಸೆದಂತಾಗುತ್ತದೆ ಎಂದರು.
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ವಿಶ್ವೇಶತೀರ್ಥ ಶ್ರೀಪಾದರು ರಾಮಮಂದಿರ ನಿರ್ಮಾಣದ ಕನಸು ಕಂಡಿದ್ದರು. ಅದರಂತೆ ಇಂದು ಅವರ ಶಿಷ್ಯರೂ ಆದ ರಾಮಮಂದಿರ ಟ್ರಸ್ಟಿ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮೂಲಕ ಶಿಲೆಯನ್ನು ರಾಮಮಂದಿರಕ್ಕೆ ಅರ್ಪಿಸುತ್ತಿದ್ದೇವೆ ಎಂದರು.