ಮಂಗಳೂರು: ಧರ್ಮಸ್ಥಳ-ಕಾರ್ಕಳದಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅರಣ್ಯ ಪ್ರದೇಶ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕಕಕ್ಕೆ ಬಂದಿದೆ ಎನ್ನಲಾಗಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆ ‘ರಾ’ ಗಮನಕ್ಕೆ ಬಂದಿದ್ದು. ಇದೀಗ ತನಿಖೆ ಆರಂಭಗೊಂಡಿದ್ದು ಆಂತರಿಕ ಭದ್ರತಾ ದಳ ಹಾಗೂ ಗುಪ್ತಚರ ದಳ ತನಿಖೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.
ಅಂದ ಹಾಗೆ ಕಳೆದ ವರ್ಷವೂ ಬೆಳ್ತಂಗಡಿಯ ಗೋವಿಂದೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡಿತ್ತು. ಆಂತರಿಕ ಭದ್ರತಾ ಇಲಾಖೆ ಅಧಿಕಾರಿಗಳು ಈ ಕುರಿತು ತನಿಖೆ ಮಾಡಿದ್ದರು. ಇದೀಗ ಮತ್ತೆ ನಿಷೇದಿತ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು ತನಿಖಾಧಿಕಾರಿಗಳಿಗೆ ಇದರ ಜಾಡು ಹಿಡಿದು ಹೋಗುವುದು ಅತ್ಯಂತ ಸವಾಳಿನ ಸಂಗತಿಯಾಗಿದೆ.
ಈ ರೀತಿಯ ಸ್ಯಾಟಲೈಟ್ ಫೋನ್ ಗಳನ್ನ ಮೊಬೈಲ್ ನೆಟ್ ವರ್ಕ್ ಸಂಪರ್ಕಕಕ್ಕೆ ಸಿಗದ ಹಡಗುಗಳಲ್ಲಿ ಬಳಸಲಾಗುತ್ತಿದ್ದು ಇದರ ಜಾಡು ತಕ್ಷಣಕ್ಕೆ ಸಿಗುವುದು ಕಷ್ಟಕರ ಎನ್ನಲಾಗುತ್ತದೆ.
ಮುಂಬೈ ದಾಳಿಯಲ್ಲಿ ಲೊಕೇಶನ್ ಶೋಧಿಸಲು, ಸಂವಹನ ನಡೆಸಿರುವ ರೀತಿಯನ್ನು ಕಂಡುಹಿಡಿಯಲು ಅಸಾಧ್ಯವಾದ ಈ ಸ್ಯಾಟಲೈಟ್ ಫೋನ್ ಅನ್ನು ಭಯೋತ್ಪಾದಕರು ಬಳಕೆ ಮಾಡಿದ್ದರು.
ಆ ಬಳಿಕ ದೇಶಾದ್ಯಂತ ಸ್ಯಾಟಲೈಟ್ ಫೋನ್ ಅನ್ನ ನಿಷೇಧಿಸಲಾಗಿತ್ತು. ಆದರೂ ಕರಾವಳಿಯಲ್ಲಿ ಮತ್ತೆ ಮತ್ತೆ ಸ್ಯಾಟಲೈಟ್ ಫೋನ್ ಸದ್ದು ಮಾಡುತ್ತಿದ್ದು ಇದನ್ನು ಯಾವುದಕ್ಕೆ ಯಾರು ಬಳಕೆ ಮಾಡುತ್ತಿದ್ದಾರೆ ಎನ್ನುವ ಆತಂಕ ಸೃಷ್ಟಿಯಾಗಿದೆ.ಈ ರಿಂಗಣದ ಜಾಡು ಹಿಡಿದ ತನಿಖಾ ತಂಡಕ್ಕೆ ಏನೆಲ್ಲಾ ಮಾಹಿತಿ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.