ಮನೆಯ ಕಷ್ಟಕ್ಕೆ ಹೆಗಲೆಣೆಯಾಗಿ ದುಡಿಮೆ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ, ಧುತ್ತನೇ ಒದಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ಈ ಹುಡುಗಿಗೆ. ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ದುಡಿದ ಇವಳು ಶೇ. 94 ಗಳಿಸಿದ್ದಾಳೆ.
ಹೌದು. ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ ಅನ್ನೋ ಪ್ರತಿಭಾವಂತೆ ಹುಡುಗಿಯ ಕತೆ. ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ನ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡ ಅಕ್ಷರಪ್ರೇಮಿ ಅಶ್ವಿನಿ.
ಪ್ರಾಥಮಿಕ ಮತ್ತು ಪ್ರೌಢಶಾಲೆ ಯವರೆಗೂ ಮೂಲ್ಕಿಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತ ಹುಡುಗಿ, ಕನ್ನಡ ಮಾಧ್ಯಮದಲ್ಲಿಯೇ ಓದಿದಾಕೆ. ತನ್ನಿಚ್ಛೆಯ ಸ್ಟಾಟಿಸ್ಟಿಕ್ಸ್ ವಿಷಯವೊಂದು ಪಿ.ಯು.ಸಿ.ಯಲ್ಲಿ ಸರಕಾರಿ ಕಾಲೇಜಲ್ಲಿ ಲಭ್ಯವಾಗದ ಕಾರಣ ಖಾಸಗಿ ಕಾಲೇಜಿನ ಆಯ್ಕೆ ಮಾಡಬೇಕಾದ ಅನಿವಾರ್ಯತೆಯಾದಾಗ ಅಮ್ಮನ ಜೊತೆ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗುತ್ತ ಸತತವಾಗಿ ಓದುತ್ತ, ಯಾವುದೇ ಟ್ಯೂಷನ್ ಇಲ್ಲದೇ ಸ್ವಂತ ಪರಿಶ್ರಮದಿಂದ ಶೇ. 94 ಗಳಿಸಿ ಬಂಟ್ವಾಳದ ಎಸ್.ವಿ.ಎಸ್.ಪದವಿಪೂರ್ವ ಕಾಲೇಜಿಗೂ ದಕ್ಷಿಣ ಕನ್ನಡ ಜಿಲ್ಲೆಗೂ ಹೆಮ್ಮೆಯನ್ನು ತಂದುಕೊಟ್ಟವಳು ಈ ಅಶ್ವಿನಿ.
ಪಾಠದಲ್ಲಿ ಮಾತ್ರವಲ್ಲ ಕ್ರೀಡೆ, ಸಂಗೀತ, ರಂಗೋಲಿ, ನೃತ್ಯ ಎಲ್ಲದರಲ್ಲೂ ಮುಂದಿದ್ದಾಳೆ. ಪ್ರೌಢಶಾಲೆಯಲ್ಲಿ ಖೋಖೋದಲ್ಲಿ ರಾಜ್ಯಮಟ್ಟದಲ್ಲೂ ಪ್ರತಿನಿಧಿಸಿದಾಕೆ. ಕರೆಂಟಿಲ್ಲದೆ ಬುಡ್ಡಿದೀಪದಲ್ಲೇ ಓದಿ ಎಸ್.ಎಸ್.ಎಲ್.ಸಿ.ಯಲ್ಲೂ ಶೇ. 88 ಗಳಿಸಿದ ಸಾಧನೆ ಇವಳದ್ದು.
◊ ಪದವಿ ಸದ್ಯಕ್ಕೆ ಕನಸಾಗಿದೆ:
ಪ್ರಸ್ತುತ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ತಾಯಿ ಸುನೀತ, ಚಿತ್ರಕಲಾವಿದರಾಗಿರುವ ಅಣ್ಣ, ಅಕ್ಷಯ್ ಮತ್ತು ಅಕ್ಕನೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ ಅಶ್ವಿನಿ.
ಪಿ.ಯು.ಸಿ. ಫಲಿತಾಂಶ ಬರುವಾಗ ಈ ಹುಡುಗಿ ಮೂಡಬಿದ್ರೆಯ ಗೇರುಬೀಜದ ಫ್ಯಾಕ್ಟರಿಯ ದುಡಿಮೆಯಲ್ಲೇ ನಿರತಳಾಗಿದ್ದವಳು ಇವಳು. ಪಿಯುಸಿಯಲ್ಲಿ ಅಂಕವೇನೋ ಪಡೆದಾಯಿತು ಆದರೆ ಮತ್ತೆ ಪದವಿ ಕನಸು ನನಸಾಗಿಸಲು, ಕಾಲೇಜು ಶುಲ್ಕ ಒಗ್ಗೂಡಿಸಲು ಹೋರಾಡುತ್ತಿದ್ದಾಳೆ ಈ ಹುಡುಗಿ.
ಲಾಕ್ ಡೌನ್ ಎನ್ನುವುದು ಇಲ್ಲದಿರುತ್ತಿದ್ದರೆ ಇವಳೇ ಸ್ವಂತ ಕೈಯಲ್ಲಿ ದುಡಿದು ಪದವಿ ಓದುತ್ತಿದ್ದಳೇನೋ? ಆದರೆ ಸದ್ಯ ಪರಿಸ್ಥಿತಿ ಹಾಗಿಲ್ಲ. ಲಾಕ್ ಡೌನ್ ನಿಂದ ಕೆಲಸವೂ ಸಿಗುತ್ತಿಲ್ಲ. ಅಮ್ಮ ,ಅಕ್ಕ, ಎಲ್ಲರೂ ಕೆಲಸವಿಲ್ಲದೇ ಖಾಲಿ ಕೈಯಲ್ಲಿ ಕೂತಿರಬೇಕಾದ ಕಾರಣ ಬಾಕಿಯಾದ ಮನೆಬಾಡಿಗೆ, ಮನೆ ಖರ್ಚು ಎಲ್ಲಕ್ಕೂ ಅಮ್ಮ ,ಅಕ್ಕ, ಅಣ್ಣನ ದುಡಿಮೆಗೆ ಹೆಗಲು ಕೊಡಬೇಕಾದ ಪರಿಸ್ಥಿತಿ ಇದೆ.
◊ ಅಶ್ವಿನಿಯ ಪದವಿ ಓದೋ ಕನಸು ನೀವು ನನಸು ಮಾಡಿ:
ಪದವಿ ಕನಸು ಕಾಣುವುದೋ? ಮನೆಯ ಕಷ್ಟಕ್ಕೆ ಹೆಗಲಾಗುವುದೋ ಎನ್ನುವ ಆಯ್ಕೆಯ ಗೊಂದಲದಲ್ಲಿರುವ ಅಶ್ವಿನಿಯ ಪದವಿ ಕನಸನು ನನಸಾಗಿಸಲು ನೆರವಾಗುವ ಕೈಗಳು ಬೇಕಿದೆ.
ಪ್ರತಿದಿನ ಮುಂಜಾವು ಮನೆ ಎದುರು ಹೊಸ ಹೊಸ ರಂಗೋಲಿ ಹಾಕುವ ಈ ಕನಸು ಕಂಗಳ ಅಶ್ವಿನಿಯ ಬದುಕಲ್ಲಿ ಪದವಿ ಕಲಿಕೆಯ ಕನಸು ಬತ್ತದಂತೆ ಒಂದಿಷ್ಟು ಕೈಗಳು ಜೊತೆಯಾಗಬೇಕಿವೆ. ಅಶ್ವಿನಿಗೆ ನೆರವಾಗಲು ಬಯಸುವವರು ಈ ಸಂಖ್ಯೆಯನ್ನು ಸಂಪರ್ಕಿಸಿ ಖುದ್ದಾಗಿ ನೆರವು ನೀಡಬಹುದಾಗಿದೆ. 7039520266 ಅಥವಾ 8108599484
♦ ಬರಹ : ವಿದ್ಯಾ ಕಾರ್ಕಳ, ಸಹಶಿಕ್ಷಕರು
ಚೆನ್ನೈತೋಡಿ ಶಾಲೆ ಬಂಟ್ವಾಳ ತಾ.
ಸಂಪರ್ಕ ಸಂಖ್ಯೆ: 9449907371