ಉಡುಪಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ ನ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಮಮಂದಿರ ನಿರ್ಮಿಸುವ 700 ಎಕರೆ ಪರಿಸರದ ಅಭಿವೃದ್ಧಿಗೆ 1000 ಕೋಟಿ ರೂ. ಅವಶ್ಯವಿದ್ದು, ವಿವಿಧ ಕಂಪೆನಿಗಳ ಸಿಎಸ್ ಆರ್ ನಿಧಿಯಿಂದ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ರಾಮಮಂದಿರ ನಿರ್ಮಾಣದ ಈ ಪವಿತ್ರ ಕಾರ್ಯದಲ್ಲಿ ದೇಶದ ಪ್ರತಿಯೊಬ್ಬ ರಾಮಭಕ್ತರು ಭಾಗಿಯಾಗಬೇಕೆಂಬ ಅಪೇಕ್ಷೆ ಇದೆ. ಅದರಂತೆ ಒಬ್ಬ ವ್ಯಕ್ತಿ ಕನಿಷ್ಠ 10 ರೂ. ಮಂದಿರ ನಿರ್ಮಾಣಕ್ಕೆ ನೀಡಬೇಕು. ಅದೇ ರೀತಿ ಒಂದು ಮನೆಯಿಂದ 100ರೂ. ಸಂಗ್ರಹ ಮಾಡುವ ಅಪೇಕ್ಷೆಯನ್ನು ಸಭೆಯಲ್ಲಿ ಮಂಡಿಸಲಾಗಿದೆ. ಈ ಬಗ್ಗೆ ನವೆಂಬರ್ 25ರಿಂದ ಡಿಸೆಂಬರ್ 25ರ ವರೆಗೂ ದೇಶದ ಉದ್ದಗಲಕ್ಕೂ ಆಂದೋಲನ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀಪಾದರು ಹೇಳಿದರು.
ಜಗತ್ತಿನಾದ್ಯಂತ ಕೋವಿಡ್ 19 ಭಾದೆ ಇರುವುದರಿಂದ ರಾಮಮಂದಿರ ನಿರ್ಮಾಣದ ಭೂಮಿಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದು, ಶೀಘ್ರದಲೇ ಭೂಮಿ ಪೂಜೆ ಕಾರ್ಯ ನೆರವೇರಲಿದೆ. ಭೂಮಿ ಪೂಜೆ ನಡೆಸುವ 15 ದಿನಗಳ ಮೊದಲು ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸದ್ಯ ರಾಮಮಂದಿರ ನಿರ್ಮಾಣ ಮಾಡುವ ಭೂಮಿಯ ಧಾರಣಾ ಸಾಮರ್ಥ್ಯವನ್ನು ಪರೀಕ್ಷಿಸುವ ಕಾರ್ಯ ಆರಂಭವಾಗಿದೆ. 200 ಅಡಿ ಆಳದಲ್ಲಿ ಕಟ್ಟಡ ನಿರ್ಮಾಣ ಮಾಡುವ ಧಾರಣಾ ಸಾಮರ್ಥ್ಯದ ಪರಿವೀಕ್ಷಣೆ ಮಾಡಲಾಗುತ್ತಿದೆ. ಎಲ್ ಎನ್ ಟಿ (ಲ್ಯಾಡ್ಸನ್ ಅಬ್ರೋ) ಕಂಪೆನಿ ಮಂದಿರ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮಂದಿರ ನಿರ್ಮಿಸುವ 200 ಅಡಿ ಆಳದಲ್ಲಿ ತಾಮ್ರಪತ್ರವನ್ನು ಇಡಲಾಗುತ್ತದೆ. ಅದರಲ್ಲಿ ಏನು ಉಲ್ಲೇಖಿಸಬೇಕೆಂಬುವುದನ್ನು ಮುಂದೆ ತೀರ್ಮಾನಿಸಲಾಗುತ್ತದೆ ಎಂದು ಶ್ರೀಪಾದರು ಹೇಳಿದ್ದಾರೆ.