♦ಲಕ್ಷ್ಮೀ ಚರಣ್ ಸಂಪತ್ ಕಾರ್ಕಳ
ಕಾರ್ಕಳ : “ಎಂಚಿನ ಸಾವ್ ದ ರಸ್ತೆ ಮಾರ್ರೆ ಉಂದು “ಅಂತ ಕಾರ್ಕಳದ ಮುಖ್ಯ ಪೇಟೆಯಲ್ಲಿ ಸಂಚರಿಸುವ ಜನ ತಮ್ಮಷ್ಟಕ್ಕೇ ಈ ಮುಖ್ಯ ರಸ್ತೆಗೆ ಉಗಿಯುತ್ತಾರೆ.ಇಷ್ಟ್ ವರ್ಷ ಆದ್ರೂ ಇವರಿಗೊಂದು ರೋಡ್ ಮಾಡೋಕಾಗಿಲ್ವಾ ಅಂತ ಜನಪ್ರತಿನಿಧಿಗಳಿಗೆ ಮನ:ಪೂರ್ತಿ ಬೈಯುತ್ತಾರೆ.
ಹೌದು. ಕಾರ್ಕಳ ಮುಖ್ಯ ರಸ್ತೆಯ 13 ಕೋಟಿ ವೆಚ್ಚದ ನೂತನ ಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದ ಪರಿಣಾಮ ತಾಜ್ಯ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯ ಇದ್ದ ಕಡೆಗೆಲ್ಲಾ ವ್ಯಾಪಿಸಿ,ಅಂಗಡಿಗಳಿಗೆಲ್ಲಾ ನುಗ್ಗಿ ರಸ್ತೆಯ ಮಧ್ಯ ಬಾಗದಲ್ಲಿ ಇದೀಗ ಶೇಖರಣೆಯಾಗಿದೆ.
ಹೀಗಾದರೆ ಪಾದಚಾರಿಗಳು, ಸಾರ್ವಜನಿಕರ ಪರಿಸ್ಥಿತಿ ಹೇಗಾಡಬೇಡ ನೀವೇ ಒಮ್ಮೆ ಯೋಚಿಸಿ. ಮೂಗು ಹೇಗೋ ಸದ್ಯ ಮಾಸ್ಕ್ ನಿಂದ ಮುಚ್ಚಿದರೂ ಇದೀಗ ಈ ರಸ್ತೆಯ ಅವಸ್ಥೆ ನೋಡಲಾಗದೇ ಕಣ್ಣೂ ಮುಚ್ಚಬೇಕಾದ ಪರಿಸ್ಥಿತಿ.
♦ತ್ಯಾಜ್ಯದಿಂದ ಮಲೇರಿಯಾ ಬಂದ್ರೆ ಏನ್ ಗತಿಯಪ್ಪಾ?
ಮಲೇರಿಯಾ ಡೆಂಗ್ಯೂ ಇನ್ನಿತರ ಸಾಂಕ್ರಾಮಿಕ ಕಾಯಿಲೆಯಿಂದ ಸಾರ್ವಜನಿಕರು ಇನ್ನಷ್ಟು ಭಯಬೀತರಾಗಿದ್ದಾರೆ. ಇದರಿಂದಾಗಿ ದುರ್ವಾಸನೆ, ಸೊಳ್ಳೆ ಕಾಟ, ಕೊಳಚೆ ನೀರು ಕುಡಿಯುವ ನೀರಿನ ಬಾವಿಗೆ ಸೇರುವುದು ಸೇರಿದಂತೆ ಅನೇಕ ಗಂಭೀರ ಸಮಸ್ಯೆಯಿಂದ ಕಾರ್ಕಳ ಪೇಟೆಯ ಜನರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಸಾರ್ವಜನಿಕರು ಅನುಭವಿಸುವ ಭೀಕರ ಸ್ಥಿತಿ ಆಳುವವರಿಗೆ ಅರ್ಥವಾಗುತ್ತಿಲ್ಲ.
♦ವ್ಯವಸ್ಥೆಯಾಯ್ತು ಅವಸ್ಥೆ:
ನೀರು ಸರಬರಾಜು ಮತ್ತು ಒಳಚರಂಡಿ ನಿರ್ಮೂಲನ ಮಂಡಳಿಯಿಂದ ನಗರಕ್ಕೆ ಮಂಜೂರಾಗಿದ್ದ 13 ಕೋಟಿ ವೆಚ್ಚದ ಒಳಚರಂಡಿ ನೂತನ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ನಾಗರಿಕರಿಗೆ ಇದೀಗ ಹಲವು ಸಂಕಷ್ಟಗಳನ್ನು ತಂದೊಡ್ಡಿತ್ತು. ಈ ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ರಸ್ತೆ ಭಾಗದ ಎಲ್ಲಾ ಕಡೆ ಹೊಂಡ ಗುಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ನಗರದ ಅಂದ ಚಂದವೇ ಕುಲಗೆಟ್ಟಿದೆ. ಸ್ವರ್ಣ ಕಾರ್ಕಳ ಸ್ವಚ್ಚ ಕಾರ್ಕಳದ ಪರಿಕಲ್ಪನೆ ಚರಂಡಿ ನೀರಲ್ಲೇ ಮಣ್ಣು ಪಾಲಾಗಿದೆ.
ಒಂದು ಕಡೆ ಹಳೆ ಚರಂಡಿ ಪೈಪುಗಳನ್ನು ಬೇಕಾಬಿಟ್ಟಿ ಒಡೆದಿದೆ.ಮತ್ತೊಂದು ಕಡೆ ನೀರಿನ ಮಟ್ಟ ಕಾಪಾಡದೇ ಪೈಪು ಅಳವಡಿಕೆ ಮಾಡಿದ ಪರಿಣಾಮ ಒಳಚರಂಡಿಯ ನೀರು ಎಲ್ಲೆಂದರಲ್ಲಿ ಹರಿದು ನಗರದ ಬಾವಿಗಳಿಗೆ ಸೇರಿ ಜನತೆ ಶಾಪ ಹಾಕುತ್ತಿದ್ದಾರೆ.
♦ಇದೆಂತ ಕಾಮಗಾರಿ ಸ್ವಾಮಿ?
ಅತ್ಯಾಧುನಿಕ ತಂತ್ರಜ್ಞಾನ ಬಳಸದೇ ಸಾಂಪ್ರದಾಯಿಕ ಶೈಲಿಯಲ್ಲಿ ಕಾಮಗಾರಿ ನಡೆಸಿದ ಹಿನ್ನಲೆಯಲ್ಲಿ ಒಳಚರಂಡಿ ಯೋಜನೆ ಭವಿಷ್ಯದ ಒತ್ತಡಕ್ಕೆ ಪೂರಕವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಕಳೆದ 10 ವರ್ಷಗಳಿಂದ ಒಳಚರಂಡಿ ಸೂರಿಕೆಯಿಂದ ನರಕ ಯಾತನೆ ಅನುಭವಿಸಿತ್ತಿದ್ದ ಸಾರ್ವಜನಿಕರಿಗೆ ಈ ಹೊಸ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ ಪರಿಣಾಮ ಈಗ ದೊಡ್ಡ ತಲೆನೋವು ಬಂದಿದೆ.
♦ಬಾವಿಯಾಯ್ತು ಚರಂಡಿ:
ವೆಂಕಟರಮಣ ದೇವಸ್ಥಾನ ಪರಿಸರ, ಅನಂತಶಯನ, ಮಾರ್ಕೆಟ್ ರಸ್ತೆ, ಮೂರು ಮಾರ್ಗ,ಆನೆಕೆರೆ, ಹಿರಿಯಂಗಡಿ ಬಂಡಿಮಠ ಪರಿಸರದಲ್ಲಿನ ಒಳಚರಂಡಿಯ ಸೋರಿಕೆಯಿಂದಾಗಿ ಕಳೆದ ಹಲವು ವರ್ಷಗಳಿಂದಲೇ ಈ ಪ್ರದೇಶದ ಬಾವಿ ನೀರನ್ನು ಉಪಯೋಗಿಸುವಂತಿರಲಿಲ್ಲ. ಅದೆಷ್ಟೋ ಬಾರಿ ರಾಸಾಯನಿಕ ಬಳಸಿ ಬಾವಿ ನೀರನ್ನು ಶುಚಿಗೊಳಿಸಿದರೂ ಮತ್ತೆ ಮತ್ತೆ ಕೊಳಚೆ ನೀರು ನುಗ್ಗುವ ಮೂಲಕ ನೂರಾರು ಬಾವಿಗಳು ಉಪಯೋಗಕ್ಕಿಲ್ಲದಂತಾಗಿದೆ.
ನಗರದ ಎಂಜಿ ಪ್ರಭು, ಪ್ರಭಾತ್ ಸಿಲ್ಕ್ ಪಕ್ಕದಲ್ಲಿ ಹಾಗೂ ಮಾರ್ಕೆಟ್ ರಸ್ತೆಯಿಂದ ಬರುವ ದಾರಿಯಲ್ಲಿನ ಎಲ್ಲ ಮಳೆನೀರು ಹರಿಯುವ ಚರಂಡಿ ಪಕ್ಕದಲ್ಲೇ ಮ್ಯಾನ್ಹೋಲ್ಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಮಳೆನೀರು ತ್ಯಾಜ್ಯನೀರಿನ ಒಳಚರಂಡಿಗೆ ಸಂಪರ್ಕಿಸುವ ಸಾಧ್ಯತೆಯಿದೆ.
ಮ್ಯಾನ್ಹೋಲ್ಗಳ ರಚನೆ ಸಂದರ್ಭ ಅವೈಜ್ಞಾನಿಕ ರೀತಿಯನ್ನೇ ಅನುಸರಿಸಲಾಗಿದ್ದು, ವಿನ್ಯಾಸ ಹಾಗೂ ಗಾತ್ರದಲ್ಲಿ ಒಳಚರಂಡಿಯ ಕೊಳವೆಗಳಿಗೂ, ಮ್ಯಾನ್ಹೋಲ್ನ ಸಂಪರ್ಕ ಕೊಳವೆಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಇದು ನೆಪಮಾತ್ರಕ್ಕೆ ಕಾಮಗಾರಿ ನಡೆಸಿದಂತಾಗಲಿದ್ದು, ನಗರದ ಬಾವಿಗಳಿಗೆ ಕೊಳಚೆ ನೀರು ನುಗ್ಗುವುದು ಮುಂದೆಯೂ ಮುಂದುವರಿಯುವ ಸಾಧ್ಯತೆಯಿದೆ. ಅಂತೂ ಕಾರ್ಕಳದ ಒಳಚರಂಡಿ ಅವಸ್ಥೆ ನೋಡಿ ಜನ ಕಣ್ಣುವ ಪರಿಸ್ಥಿತಿಗೆ ಒಳಗಾಗಿದ್ದಂತೂ ಸತ್ಯಸ್ಯ ಸತ್ಯ.