ಕೋರೋನ ಲೊಕ್ಡೌನ್ ಸಮಯದಲ್ಲಿ ಒಂದು ದಿನ ಎಂದಿನಂತೆ ಬೈಗು ಹೊತ್ತಲ್ಲಿ ಟೆರೇಸ್ ನಲ್ಲಿ ಅಡ್ಡಾಡುತ್ತಾ ಸುತ್ತಲಿನ ವಿಹಂಗಮ ದೃಶ್ಯ ಸುಮ್ಮನೆ ವೀಕ್ಷಿಸುತ್ತಿದ್ದಾಗ ಹಲವಾರು ಅನಿಸಿಕೆಗಳು ಮನದಲ್ಲಿ ಸುಳಿದವು. ಪ್ರಪಂಚವೆಲ್ಲ ವ್ಯಾಪಿಸಿದ ಕೊರೊನದಿಂದ ಮನುಕುಲವು ಅಸಹಾಯಕವಾದರೂ, ತನ್ನ ಉಳಿವಿಗಾಗಿ ಹೋರಾಟ ಮಾಡುತ್ತಲೇ ಆತ್ಮಾವಲೋಕನ ಮಾಡುತ್ತಿದೆ ಅನಿಸಿತು. ಈ ಹಿಂದೆಯೂ ಮನುಕುಲದ ಮೇಲೆ ಎಷ್ಟೊಂದು ಮಾರಕ ರೋಗಗಳ ಧಾಳಿ ನಡೆದಿಲ್ಲ?. ಆದರೆ ಅವೆಲ್ಲವನ್ನು ಗೆದ್ದು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆಯಲ್ಲವೇ ಅಂತ ಅನಿಸಿತು.
ನಾನಾ ಬವಣೆಗಳ ನಡುವೆಯೂ ಮಾನವನ ಜೀವನೋತ್ಸಾಹ, ಬದುಕುವ ಅದಮ್ಯ ಹಂಬಲ, ಈ ಕೊರೊನವನ್ನು ಹಿಮ್ಮೆಟ್ಟಿಸಬಹುದು.
ಇದೀಗ ನನ್ನ ಕಣ್ಣಮುಂದೆ ಕಾಣಿಸುತ್ತಿದೆ ನಿರ್ಜನವಾಗಿ ಹಾವಿನಂತೆ ಉದ್ದಕ್ಕೂ ಬಿದ್ದಿರುವ ರಸ್ತೆ, ಜನಸಂಚಾರ, ವಾಹನಗಳ ಸದ್ದುಗದ್ದಲವಿಲ್ಲದ ನಿಶ್ಯಬ್ದ ವಾತಾವರಣ. ಕೇವಲ ಗಾಳಿಗೆ ತೂಗಾಡುವ ಗಿಡಗಳ ಮರ್ಮರ ಮತ್ತು ಹಕ್ಕಿಗಳ ಚಿಲಿಪಿಲಿ ಅಷ್ಟೇ. ದಿಗಂತದಲ್ಲಿ ಜಾರುತ್ತಿರುವ ಸೂರ್ಯಬಿಂಬ. ಶತಮಾನಗಳಿಂದ ಎಲ್ಲಾ ವಿದ್ಯಮಾನಗಳಿಗೆ ಸಾಕ್ಷಿಭೂತವಾಗಿರುವ ದೇಗುಲದ ಪೂಜೆಯ ಸಣ್ಣಗಿನ ಘಂಟಾನಾದ ಮತ್ತು ಸುತ್ತಲಿನ ನೀರವ ವಾತಾವರಣ ಅಲೌಕಿಕ ಶಾಂತತೆಯ ಅನುಭೂತಿ ಕೊಡುತ್ತಿದೆ.
ಪರಂಪರೆಗಳ ಮೌಲ್ಯಗಳ ಅರಿವು, ಆದ್ಯಾತ್ಮಿಕ ಚಿಂತನೆಗಳು, ಈ ಪ್ರಪಂಚದಲ್ಲಿ ಎಲ್ಲ ಜೀವರಾಶಿಗಳ ಜೊತೆಗೆ ನಾವೂ ಕೂಡ ಸಹಯಾತ್ರಿಗಳು ಎಂಬ ಉದಾತ್ತ ಭಾವ ಮನುಕುಲದೊಳಗೆ ತುಂಬಿ ಹೊಸ ಚೈತನ್ಯ, ಉತ್ಸಾಹ ತುಂಬಿ ಬರಲಿ ಅಂತ ಅನಿಸಿತು. ಹೀಗೆಲ್ಲ ಅನಿಸಿಕೆಗಳ ಸರಮಾಲೆ ಪೋಣಿಸುತ್ತ ಕತ್ತಲಾಗುತ್ತಿದ್ದಂತೆ ಎಚ್ಛೆತ್ತು ಮತ್ತೆ ಜೀವನ್ಮುಖಿಯಾಗಿ ಟೆರೇಸಿನಿಂದ ಕೆಳಗಿಳಿದು ಬಂದೆ.ಕಣ್ಣು ಬಿಟ್ಟು ನೋಡಿ ನಿಮಗೂ ನನ್ನಂತೆಯೇ ಖುಷಿ ಸಿಗಬಹುದು !