ಕೊರೊನಾ ಕೊರೊನಾ ಅಂತ ಹೆದರಿಸುವುದನ್ನು ಮೊದಲು ಬಿಡಿ, ಮನಸ್ಸು ಗಟ್ಟಿಯಾಗಿಸುವ ಕೆಲಸ ಮಾಡಿ : ಡಾ.ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ ಒಂದಷ್ಟು ಟಿಪ್ಸ್

♠ ಡಾ.ಶಶಿಕಿರಣ್ ಶೆಟ್ಟಿ ಉಡುಪಿ 

ಘಟನೆ: 1 : ಇದು 2009 ರಲ್ಲಿ ನಡೆದ ಘಟನೆ. ವೈದ್ಯನಾದ ನನ್ನ ಕ್ಲಿನಿಕ್ ಗೆ ರಾತ್ರಿ 7 ಗಂಟೆಗೆ ಯುವಕನೊಬ್ಬ ಗಾಬರಿಯಿಂದ ಬಂದಿದ್ದ, ಆತನೊಂದಿಗೆ 4-5 ಜನರಿದ್ದರು. “ಸರ್ ಹಾವು ಕಚ್ಚಿದೆ” ಎಂದ. ಕಚ್ಚಿದ ಜಾಗ ನೋಡಿದೆ, ಬಲಗೈಯಲ್ಲಿ ಹಲ್ಲುಗಳ ಎರಡು ಚಿಕ್ಕ ಗಾಯಗಳಿದ್ದವು.

ಜೊತೆಗಿದ್ದ ಇಬ್ಬರು “ಅದು ಭಯಂಕರ ಸರ್ಪ, ಕೂಡಲೇ ವಿಷವೇರುವುದು” ಹಾಗೆ ಹೀಗೆ ಅಂತ ಕತೆ ಹೇಳುತ್ತಲಿದ್ದರು. ಸಂದೇಹ ಬೇಡ ಎಂದು ಸಮೀಪದ ಆಸ್ಪತ್ರೆಗೆ ಕಳುಹಿಸಿದೆ. ಇದಾಗಿ 15 ನಿಮಿಷದಲ್ಲಿ ಹುಡುಗನ ತಂದೆ ವಿಷರಹಿತ ಕೇರೆ ಹಾವೊಂದನ್ನು ಕೊಂದು ತಂದಿದ್ದರು. “ನನ್ನ ಮಗನಿಗೆ ಕಚ್ಚಿದ್ದು ಇದೇ” ಎಂದವರೇ ಸಮಾಧಾನದಿಂದ ಆಸ್ಪತ್ರೆಯ ಕಡೆ ಹೋದರು. ಮಾರನೆಯ ದಿನ ಆ ಹುಡುಗನ ಸಾವಿನ ಸುದ್ದಿ ನನ್ನನ್ನು ದಂಗುಬಡಿಸಿತ್ತು. ಹುಡುಗ ಅತಿಯಾಗಿ ಹೆದರಿಕೊಂಡು ಶಾಕ್ ನಿಂದ ಕಣ್ಣು ಮುಚ್ಚಿದ್ದ.

ಘಟನೆ 2: ಅದೇ ವರ್ಷ ಕುಡುಕನೊಬ್ಬ ತನಗೆ ಕಚ್ಚಿದ್ದ ವಿಷದ ಹಾವನ್ನೇ ಕಚ್ಚಿ, ಕೊಂದು ಆಸ್ಪತ್ರೆಗೆ ಕೊಂಡು ಹೋಗಿ ಆಂಟಿ ವೆನಮ್ ಚುಚ್ಚಿಸಿಕೊಂಡು ಬದುಕಿದ್ದು ನಿಜಕ್ಕೂ ನಂಬಲಸಾಧ್ಯ, ಆದರೂ ಸತ್ಯ.

ಈ ಎರಡು ಘಟನೆಗಳಲ್ಲಿ ತಿಳಿದುಕೊಳ್ಳಬಲ್ಲ ಸತ್ಯ ಇಷ್ಟೇ, ನಮ್ಮ ಸುತ್ತಮುತ್ತ ನಮ್ಮನ್ನು ಹೆದರಿಸುವ ವ್ಯಕ್ತಿಗಳಿಂದ ದೂರ ಇದ್ದರೆ ಏನೂ ಆಗದು. ಆತ್ಮವಿಶ್ವಾಸ ತುಂಬಿಸುವ ವಾತಾವರಣವಿದ್ದಾಗ, ಸಾವನ್ನು ಕೂಡಾ ಗೆಲ್ಲಬಹುದು. ಹಾಗೆಯೇ ಸದಾ ಹೆದರಿಸುವ ಜನರೊಂದಿಗೆ ಸೇರಿ ನಾವು ಹೆದರಿಕೊಂಡರೆ ಸರಿ ಇದ್ದವನೂ ಬೇಗ ಸಾಯಬಹುದು.

ಈಗ ಕೊರೋನಾ ವಿಷಯ ಕೇಳಿ

ಕೊರೊನ ಎಂಬ ದುಷ್ಟ ಕ್ರಿಮಿ (ವೈರಸ್) ಯೊಂದು ವಿಶ್ವವ್ಯಾಪಿಯಾಗಿದೆ. ಈ ಸಾಂಕ್ರಾಮಿಕ ಕಾಯಿಲೆಯು ವಿಶ್ವದಲ್ಲಿ ಲಕ್ಷಾಂತರ ಮಂದಿಗೆ ಕಂಟಕವಾಗಿ ಪರಿಣಮಿಸಿದೆ. ಇದು ಕೊರೊನದ ಋಣಾತ್ಮಕ ವಿಷಯಗಳಾದರೆ , ಕೇವಲ ಶೇ.3 ಇಂದ ಶೇ.3.5 ಸಾವು
ಸಂಭವಿಸುವುದು, ರೋಗನಿರೋಧಕ ಶಕ್ತಿ ವರ್ಧಿಸುವಂತೆ ಕ್ರಮಗಳನ್ನು ರೂಪಿಸುವುದು, ಮತ್ತೊಬ್ಬರಿಂದ ಅಂತರ ಕಾಯ್ದುಕೊಳ್ಳುವುದು, ಪದೇ ಪದೇ ಕೈ ತೊಳೆಯುವುದು, ಮೂಗು, ಬಾಯಿ ಮುಟ್ಟದಿರುವುದು, ಇತ್ಯಾದಿ ಕನಿಷ್ಟ ಜಾಗರೂಕತೆಗಳಿಂದ ಇದು ಮಾರಕವಾಗದಂತೆ ತಡೆಗಟ್ಟಬಹುದಾದ ಕಾಯಿಲೆ ಎನ್ನುವುದು ಧನಾತ್ಮಕ ಸಂಗತಿ.

ಆದರೆ ಇಂದು ಮಾಧ್ಯಮಗಳು ಕೇವಲ ತಮ್ಮ TRP ಗೋಸ್ಕರ ಕೊರೊನದ ಋಣಾತ್ಮಕ ವಿಷಯಗಳಿಗೆ ಖಾರ, ಮಸಾಲೆ, ಒಗ್ಗರಣೆ ಸೇರಿಸಿ
ಶಬ್ದಕೋಶದಲ್ಲಿ ಎಲ್ಲೂ ಉಪಯೋಗಿಸದ ಶಬ್ದಗಳಾದ ಮಹಾಮಾರಿ, ವಿಶ್ವ ಕಂಟಕ, ಮನುಕುಲನಾಶ’ಎಂಬಿತ್ಯಾದಿ ಶಬ್ದಗಳಿಂದ ಹೆದರಿಸುವ ಕೆಲಸ ಮಾಡುತ್ತಿರುವುದು ಮಾತ್ರ ದುರಂತವೇ ಸರಿ. ಟಿ.ವಿ ಮಾಧ್ಯಮಗಳಂತೂ ಜನರಲ್ಲಿ ಇನ್ನಷ್ಟು ನೆಗೆಟಿವ್ ಭಾವಗಳನ್ನು ಹುಟ್ಟಿಸುತ್ತಿದೆ.

ನೀವೇ ಒಮ್ಮೆ ವಿವೇಚಿಸಿ
♦ ಬೆಳಗ್ಗೆಯಿಂದ ಸಂಜೆಯ ತನಕ ಟಿವಿ ಮಾಧ್ಯಮಗಳು  ‘ಕೊರೊನ ಕೊರೊನ’ ಎಂದು ದಪ್ಪ ಅಕ್ಷರಗಳಲ್ಲಿ ಬರೆದು, ಉಚ್ಚ ಸ್ವರದಲ್ಲಿ ಕೂಗುವ ಬದಲು ಒಂದೇ ವಾಕ್ಯದಲ್ಲಿ ಅದರ ವಾಸ್ತವವನ್ನು ವಿವರವಾಗಿ ನೀಡಬಾರದೇಕೆ ?

♦ ಕೆಲವು ಶಬ್ದಗಳನ್ನು ಉದಾ: ‘ಮಹಾಮಾರಿ, ವಿಶ್ವಕಂಟಕ, ಮನುಕುಲನಾಶಕ’ ಎಂಬಿತ್ಯಾದಿ, ಮನಸ್ಸಲ್ಲಿ ಅತ್ಯಧಿಕ ಭಯ ಉಂಟುಮಾಡುವ ಪದಗಳ ಬಳಕೆಯನ್ನು ನಿಷೇಧಿಸಬಾರದೇಕೆ ?

♦ ಕೊರೊನ ಪೀಡಿತರ ಹೆಸರು ಬಳಸುವುದನ್ನು ನಿಷೇಧಿಸಿ, ಸೋಂಕಿತರಿಗೆ ಸಂಖ್ಯೆಯೊಂದನ್ನು ಕೊಟ್ಟು ಆ ಮೂಲಕ ರೋಗಿಯನ್ನು ಗುರುತಿಸುವ ಸರಕಾರದ ನಡೆ ಸ್ವಾಗತಾರ್ಹ, ಆದರೆ ಸೋಂಕಿತರ ವ್ಯಾಪಾರದ ಸ್ಥಳಗಳನ್ನು ಸೀಲ್ ಮಾಡಿ, ಅಲ್ಲಿ ನಿಂತು ತಾವೇನೋ ಸಾಧನೆ ಮಾಡಿದವರಂತೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹಂಚಿ, ಆ ವ್ಯಕ್ತಿಯ ಜೀವನಾಧಾರವಾದ ಉದ್ಯೋಗಕ್ಕೆ ಶಾಶ್ವತವಾದ ಕೊಡಲಿಯೇಟು ನೀಡಿ ಗಾಯದ ಮೇಲೆ ಬರೆ ಎಳೆಯುವುದು ಅದೆಷ್ಟು ಸರಿ?

♦ ಸತ್ತ ವ್ಯಕ್ತಿಗಳ ಅಂತ್ಯಕ್ರಿಯೆಯ ಫೋಟೋ, ವಿಡಿಯೋ ಹಂಚಿಕೊಂಡು ಮತ್ತಷ್ಟು ಭಯದ ವಾತಾವರಣ ಸೃಷ್ಟಿಸುವುದು ತಪ್ಪಲ್ಲವೇ?

ಕೊರೋನ ಪೀಡಿತರ ಸಂಖ್ಯೆಯನ್ನು ಕ್ರಿಕೆಟ್ ಸ್ಕೋರ್ ಕೊಡುವ ರೀತಿ ಬಿಂಬಿಸುವ ಔಚಿತ್ಯವೇನು?
ಇದನ್ನೆಲ್ಲ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶಕ್ಕಾಗಿ ಪ್ರಕಟಿಸುತ್ತೇವೆ’ ಎಂದು ವಿವರಣೆ ನೀಡುವ ಮಾಧ್ಯಮಗಳಿಗೆ ನನ್ನ ಉತ್ತರ ಇಷ್ಟೇ- ‘ಹೆದರಿಸಿ ಮಾಹಿತಿ ಕೊಡುವುದನ್ನು ಬಿಟ್ಟು ಸಾರ್ವಜನಿಕರ ಮನೋಬಲವನ್ನು ಇನ್ನಷ್ಟು ಹೆಚ್ಚಿಸಿ’ ಮಾಹಿತಿ ಕೊಡಬಹುದಲ್ಲವೇ? ಆ ಮೂಲಕ ಮಾಧ್ಯಮಗಳು ಸಮಾಜದ ಮಿತ್ರರಾಗಬಹುದಲ್ಲವೇ? ಮಾಧ್ಯಮಗಳು ಏನು ಮಾಡಬಹುದೆಂದು ಒಮ್ಮೆ ಯೋಚಿಸಿ.

ಹೀಗಿದ್ದರೆ ಎಷ್ಟು ಒಳ್ಳೇದು !

♦ ಕೊರೊನದಿಂದ ಮುಕ್ತರಾದವರ ಸಂಖ್ಯೆಯನ್ನು ದಪ್ಪಕ್ಷರಗಳಲ್ಲಿ ಪ್ರಕಟಿಸಿ, ದೇಶದಲ್ಲಿ, ರಾಜ್ಯದಲ್ಲಿ ಹಾಗೂ ವಿಶ್ವದಲ್ಲಿ ರೋಗ ಪೀಡಿತರ ಸಂಖ್ಯೆ, ಮರಣ ಹೊಂದಿದವರ ಸಂಖ್ಯೆಯನ್ನು ನಮೂದಿಸಲಿ ..

♦ ಗುಣಮುಖರಾದವರ ಸಂದರ್ಶನ, ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಿ.

♦ ಯಾವ ಅರೋಗ್ಯವರ್ಧಕ ಆಹಾರ ವಿಚಾರಗಳನ್ನು ಆಸ್ಪತ್ರೆಯಲ್ಲಿ ಅನುಸರಿಸುತ್ತಾರೆ ಎಂಬ ಮಾಹಿತಿ ಸಾಮಾನ್ಯ ಜನರಿಗೆ ನೀಡಲಿ ..
♦ ಮನುಷ್ಯರ ಮನೋಬಲ ವೃದ್ಧಿಸುವಂತಹ ಕಾರ್ಯಕ್ರಮ ಗಳನ್ನೂ ಆಗಾಗ ಪ್ರಸಾರ ಮಾಡಲಿ
ಆರೋಗ್ಯ ತಜ್ಞರ, ಮಾನಸಿಕ ತಜ್ಞರ ಕಾರ್ಯಕ್ರಮ ಹಾಗೆಯೇ ಯೋಗ, ಪ್ರಾಣಾಯಾಮಗಳ ಮಹತ್ವ ವಿವರಿಸಲಿ .
♦ಎಮರ್ಜೆನ್ಸಿ ಫಂಡಿಂಗ್ ನಡೆಸಿ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕರಿಗೆ ನೆರವಾಗಲಿ.

ನಾವು ಸಮಾಜಕ್ಕೆ ಕಣ್ಣಾಗಬೇಕೇ ಹೊರತು ಆ ಕಣ್ಣುಗಳನ್ನು ಚುಚ್ಚುವ ಸೂಜಿಯಾಗಬಾರದು, ಸಮಾಜದ ಶಕ್ತಿಯಾಗಬೇಕೇ ಹೊರತು ಸಮಾಜಕ್ಕೆ ಕಂಟಕವಾಗಬಾರದು, ಇಂತಹ ದುಷ್ಟ ವೈರಸ್ನ ಓಡಿಸಲು ಮಾಧ್ಯಮವೆಂಬುದು ಒಂದು ಶಸ್ತ್ರವಾಗಬೇಕೇ ಹೊರತು ‘ಊರು ಸುಟ್ಟರೆ, ಸುಡಲಿ ಆ ಬೆಂಕಿಯಲ್ಲಿ ನಾನು ಚಳಿ ಕಾಯಿಸಿಕೊಳ್ಳುತ್ತೇನೆ’ ಎಂಬ ದುಷ್ಟ ಬುದ್ಧಿ ನಮ್ಮದಾಗದಿರಲಿ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ಹೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ಮೊದಲು ನಿಯಂತ್ರಿಸೋಣ, ಅಂದೇ ಕೊರೊನವನ್ನು ದೇಶದಿಂದ ಓಡಿಸಲು ಬೇಕಾಗುವ ಮನೋಬಲ ನಮ್ಮದಾಗಲಿದೆ. ನಮ್ಮ ಮನಸ್ಸು ಯಾವಾಗ ಗಟ್ಟಿಗೊಳ್ಳುತ್ತದೋ ಅಂದೇ ಕೊರೊನ ದೇಶ ಬಿಟ್ಟು ಓಡಿ ಹೋಗುವುದಂತೂ ಗ್ಯಾರಂಟಿ

ಡಾ.ಶಶಿಕಿರಣ್ ಶೆಟ್ಟಿ ಅವರು ಉಡುಪಿಯ ಹೋಂ ಡಾಕ್ಟರ್ ಫೌಂಡೇಶನ್ ನಲ್ಲಿ ವೈದ್ಯರು