ಅವನನ್ನು ಕಣ್ಣರಳಿಸಿ ನೋಡಿ ಬಿಡಿ: ನಿಮಗೂ ಅವನ ಮೇಲೆ ಪ್ರೀತಿಯಾಗ್ತದೆ !

♥ಸ್ವಾತಂತ್ರ್ಯ ಎ.ಎನ್

ಬರಡು ಭೂಮಿಯಲ್ಲಿರುವ ಮಣ್ಣ ನೋಡಿ ಆಶ್ಚರ್ಯವಾಗುವುದಿಲ್ಲ, ನದಿಯಲ್ಲಿರುವ ನೀರು ನೋಡಿ ಹೊಸತ್ತು ಅನ್ನಿಸುವುದಿಲ್ಲ, ಆದರೆ ನನ್ನ ಪ್ರೀತಿಯ ಹುಡುಗನ ಸಹವಾಸದಿಂದ ಇವೆಲ್ಲವೂ ಆಕರ್ಷಕವೆನಿಸತೊಡಗಿತು.ಪ್ರೀತಿಯೆಂದರೆ  ಒಂದು ಹನಿಯಷ್ಟು ನಂಬಿಕೆ, ಆಸಕ್ತಿ ಇರದ ನನಗೆ ಪ್ರೀತಿಯ ಅನುಭವ ಕೊಟ್ಟದ್ದು ನನ್ನವನು !

ಎಲ್ಲೋ ಕಳೆದು ಹೋದ ನನ್ನ ಮನಸ್ಸನ್ನು ಮತ್ತೆ ಹುಡುಕಿಕೊಟ್ಟ ಕೀರ್ತಿ ಅವನದ್ದು. ನನ್ನ ತುಂಬಾ ಸತಾಯಿಸುವ, ಪ್ರೀತಿಸುವ ಅವನು, ತನ್ನ ಪವಿತ್ರವಾದ ವಿಶಾಲ ಮನಸ್ಸಲಿ, ನನ್ನನ್ನು ಬಚ್ಚಿಟ್ಟು ಕೊಂಡಿದ್ದಾನೆ. ಬಯಸಿದ ತಕ್ಷಣ ಎಂದಿಗೂ ಸಮಯಕ್ಕೆ ಬರುವವನಲ್ಲ ಅವನು, ನಾನು ಹಾಡಿದರೂ, ಅತ್ತರೂ, ಅವನು ಬರುವುದು ಅವನ ಸಮಯಕ್ಕೇ. ನನಗೆ ಸಿಟ್ಟು ಬಂದರೂ ನನ್ನ ಕೋಪ ತಂಪು ಮಾಡುವ ವಿಧಾನ ಅವನಿಗೆ ಗೊತ್ತು. ಅದಕ್ಕೆ ಉಳಿದವರನ್ನೆಲ್ಲ ಮಾತನಾಡಿಸಿದ ನಂತರ ನನ್ನ ಬಳಿ ಬರುತ್ತಾನೆ.ಇವನ ಬರುವಿಕೆಗೆ ಕಾಯುವವಳು ನಾನೊಬ್ಬಳೇ ಅಲ್ಲ. ರಾಶಿ ರಾಶಿ ಜನರಿದ್ದಾರೆ.

♥ ನನ್ನ ಇಷ್ಟು ಪ್ರೀತಿ  ಮಾಡುವ ಅವನು ಆಗಾಗ ತಲೆಹರಟೆ ಮಾಡ್ತಾನೆ. ಕಿಟಕಿಯಿಂದ ಜಿಗಿದು ಬರುವುದು.ಭಯವಾಗುವಂತೆ ಶಬ್ದ ಮಾಡುವುದು, ಹೆದರಿಸುವುದು. ಹೀಗೆ ಕೀಟಲೆ ಮಾಡುತ್ತಲೇ ಇರುತ್ತಾನೆ. ಇವನ ಧೈರ್ಯವೋ ಧೈರ್ಯ. ಏಕೆಂದರೆ ಇವನು ನಮ್ಮ ಮನೆಯೆದುರೇ  ಬಂದು ನನ್ನ ನೋಡಿ ಕಣ್ಣು ಹೊಡೆದು ಹೋದದ್ದು ಉಂಟು.  ನನ್ನ ಅಪ್ಪ ಅಮ್ಮನ ಭಯವೂ ಇವನಿಗೆ ಇಲ್ಲ ಅಂತೀನಿ ಅಬ್ಬಾ ಇವನ ಸೊಕ್ಕೇ !

ಒಮ್ಮೆ ಇವನ ಜೊತೆ ಮಾತಾಡುವಾಗ ಅಮ್ಮ ಸರೀ ಬೈದುಬಿದ್ದಳು. ”ಸಾಕು ಬಾ ಅವನ ನೋಡಿದ್ದು”ಎಂದು ಒಳಗೆ ಕರೆದುಕೊಂಡೇ ಹೋದಳು.ಆದರೆ ನಾನವನನ್ನು ಕದ್ದು ಮುದ್ದು ನೋಡುತ್ತಲೇ ಇರುತ್ತಿದ್ದೆ.

ಮೊನ್ನೆಯಿಂದ ನನ್ನವನ ಪತ್ತೆಯಿಲ್ಲ.ಎಲ್ಲಿ ಹೋದ ಇವನು ಅಂತ ಕಿಟಕಿ ಪಕ್ಕ ಕೂತು ನೋಡಿದೆ. ತೋಟದತ್ತಿರ ನೋಡಿದೆ.ಎಲ್ಲೂ ಇವನ ಪತ್ತೆಯೇ ಇಲ್ಲ. ತಲೆಬಿಸಿ ಆಗಿದೆ ನಂಗೆ, ನಿಮಗೇನಾದ್ರೂ ಗೊತ್ತಾ, ನಾನು ಜೀವದಂತೆ ಪ್ರೀತಿಸೋ ನನ್ನ ಪ್ರೀತಿಯ ಮಳೆರಾಯ ಎಲ್ಲಿ ಹೋಗಿದ್ದಾನಂತ? ಅಯ್ಯೋ ಮಳೆ ಬಗ್ಗೆ ಬರೆದದ್ದಾ ಅಷ್ಟು ಹೊತ್ತು ಅಂತ ಬೈಯ್ಯಬೇಡಿ. ಮಳೆರಾಯನೇ ನನ್ನ ಪ್ರೀತಿಯ ಹುಡುಗ.

ಆ ಮಳೆರಾಯನ ನೋಡಿ ಸೋಲದೇ ಇರುವವರು ಯಾರೂ ಇಲ್ಲ. ಒಮ್ಮೆ ಪ್ರಯತ್ನ ಮಾಡಿ ನೋಡಿ, ನಿಮಗೂ ಅವನ ಮೇಲೆ ಖಂಡಿತ ಪ್ರೀತಿ ಹುಟ್ಟುತ್ತದೆ. ಈ ಪ್ರೀತಿ ಹುಟ್ಟಿದಾಗ ಆಗುವ ಅನುಭವ ಬಹಳ ವಿಭಿನ್ನವಾದದ್ದು . ಆಮೇಲೆ ನೀವೆಲ್ಲಾದರೂ ಹೊರಗೆ ಹೊರಟು ನಿಂತ ಸಮಯಕ್ಕೆ ಮಳೆರಾಯ ಬಂದರೆ  ಬೈದುಕೊಳ್ಳದೇ  ಅವನನ್ನು ಪ್ರೀತಿಯಿಂದ  ಸ್ವಾಗತಿಸುತ್ತೀರಿ ನೀವು ನೋಡ್ತಾ ಇರಿ.

 

       ♥ಸ್ವಾತಂತ್ರ್ಯಾ ಎ.ಎನ್

(ನೀವು ಇಂತದ್ದೇ ಒಂದು ಚೆಂದದ ಬರಹ ಬರೆದಿರಬಹುದು, ನಿಮ್ಮೊಳಗೂ ಗುಟ್ಟಾಗಿ ಅರಳುವ ಪಿಸುಮಾತುಗಳಿರಬಹುದು ಅದನ್ನು ನಮಗೆ ಬರೆದು ಕಳಿಸಿ “ಕಂಡಿದ್ದು ಬರೀರಿ”ವಿಭಾಗ ಇರೋದೇ ನೀವೆಲ್ಲಾ ಬರೆಯೋದಕ್ಕೆ, ಕನಸು ಕಾಣೋದಕ್ಕೆ- ನಿಮ್ ಬರಹ ಇಲ್ಲಿಗೆ ಕಳಿಸಿ        ಇ-ಮೇಲ್[email protected]  ♠ Whtsapp-7483419099)