ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಜುಲೈ 5 ರಿಂದ ಆಗಸ್ಟ್ 2 ರ ನಡುವೆ ಬರುವ ಎಲ್ಲ ಭಾನುವಾರಗಳಂದು ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ವಿಡಿಯೋ ಹೇಳಿಕೆ ಮೂಲಕ ಲಾಕ್ ಡೌನ್ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನಾಳೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ, ವಹಿವಾಟು ಬಂದ್ ಆಗಲಿದೆ. ಮೆಡಿಕಲ್ ಶಾಪ್, ಕ್ಲಿನಿಕ್, ಆಸ್ಪತ್ರೆ ಒಪನ್ ಇರಲಿದೆ. ಹಾಲು, ಪೇಪರ್ ಹೊರತುಪಡಿಸಿ ಉಳಿದ ಯಾವುದೇ ವಸ್ತುಗಳು ದೊರೆಯುವುದಿಲ್ಲ. ಅವುಗಳನ್ನು ಇಂದೇ ಖರೀದಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಿಗದಿಯಾದ ಮದುವೆಗೆ ಅನುಮತಿ:
ಮುಂಚಿತವಾಗಿ ನಿಗದಿ ಪಡಿಸಿರುವ ಮದುವೆಗೆ ಸರ್ಕಾರದ ಮಾರ್ಗಸೂಚಿಯಂತೆ 50 ಜನಕ್ಕೆ ಮೀರದಂತೆ ತಹಶೀಲ್ದಾರ್ ಅನುಮತಿ ಪಡೆದು ನಡೆಸಬಹುದು ಎಂದು ಹೇಳಿದ್ದಾರೆ.
ಅನಾಶ್ಯಕವಾಗಿ ಓಡಾಡಿದರೆ ಕೇಸ್ ದಾಖಲು:
ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಯಾರು ಕೂಡ ಅನಾಶ್ಯಕವಾಗಿ ಓಡಾಡಬಾರದು. ಅನಾವಶ್ಯಕವಾಗಿ ತಿರುಗುವುದು ಕಂಡು ಬಂದರೆ ಅಂತಹವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.