ಕುಂದಾಪುರ : ದೇಶಾದ್ಯಾಂತ ಲಾಕ್ಡೌನ್ ಮಾಡಿದ್ದರೂ, ಕೋವಿಡ್-19 ಸೋಂಕು ಹರಡುವಿಕೆಯ ಪ್ರಮಾಣ ಇಳಿಮುಖವಾಗದೆ ಇರುವುದು ಆತಂಕಗಳನ್ನು ಹೆಚ್ಚಿಸುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿರುವುದರಿಂದ ಸಮುದಾಯಕ್ಕೆ ಸೋಂಕು ಹಬ್ಬುತ್ತಿದೆಯಾ ಎನ್ನುವ ಜಿಜ್ಞಾಸೆಯನ್ನು ಹುಟ್ಟುಹಾಕುತ್ತಿದೆ. ಮಹಾರಾಷ್ಟ್ರ ಹಾಗೂ ಹೊರ ಭಾಗಗಳಿಂದ ಬಂದವರನ್ನು ವ್ಯವಸ್ಥಿತವಾಗಿ ಕ್ವಾರಂಟೈನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಆರೋಪಿಸಿದ್ದಾರೆ.
ಕಟ್ಬೇಲ್ತೂರಿನ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಹೊರ ರಾಜ್ಯ ಹಾಗೂ ದೇಶಗಳಿಂದ ಬಂದವರಲ್ಲಿ ಸೋಂಕು ಪತ್ತೆಯಾಗುತ್ತಿತ್ತು ಎನ್ನುವ ಅಭಿಪ್ರಾಯಗಳಿದ್ದವು. ಆದರೆ ಇದೀಗ ಸ್ಥಳೀಯ ಜನಸಮಾನ್ಯರಲ್ಲಿಯೂ ಸೋಂಕು ಪತ್ತೆಯಾಗುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ತಯಾರಿ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಜನರಿಗೆ ತಿಳಿ ಹೇಳುವ ಹಾಗೂ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳು ನಡೆಯಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೆ ಲಾಕ್ಡೌನ್ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದರೂ, ಈ ಕುರಿತು ಯಾವುದೆ ಸ್ವಷ್ಟತೆಗಳಿಲ್ಲ. ಆದರೆ ಬಡ ಕೂಲಿ ಕಾರ್ಮಿಕರು, ಆಟೋ ಚಾಲಕರು ಹಾಗೂ ಬಡ ವರ್ಗದವರ ಜೀವನ ನಿರ್ವಹಣೆಯ ಬಗ್ಗೆ ಆಲೋಚನೆ ಮಾಡಿಕೊಂಡು ಮುಂದಿನ ತೀರ್ಮಾನಗಳ ಬಗ್ಗೆ ಸರ್ಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಿ ಎಂದು ಗೋಪಾಲ ಪೂಜಾರಿಯವರು ಸಲಹೆ ನೀಡಿದ್ದಾರೆ.
ಇಂದು ನಡೆಯಲಿರುವ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಅಧಿಕಾರ ಸ್ವೀಕಾರ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಬೈಂದೂರು ಕ್ಷೇತ್ರದ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ನೇರ ವೀಕ್ಷಣೆ ಮಾಡಲು ಅನೂಕೂಲವಾಗುವಂತೆ ಕ್ಷೇತ್ರ ವ್ಯಾಪ್ತಿಯ 45 ಪಂಚಾಯಿತಿಗಳಲ್ಲಿ ಡಿಜಿಟಲ್ ಆಪ್ ಮೂಲಕ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.