ಕುಂದಾಪುರ ತಾಲೂಕಿನ ಒಟ್ಟು ಎಂಟು ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಏನೂ ಗೊಂದಲಗಳಾಗದಂತೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ನಗರದ ಬೋರ್ಡ್ ಹೈಸ್ಕೂಲು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಏನೂ ತೊಡಕಾಗದಂತೆ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಬೆಳಿಗ್ಗೆ ಎಂಟು ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗಳಿಗೆ ತೆರಳಿದ್ದಾರೆ. ವಿದ್ಯಾರ್ಥಿಗಳ ಸಮಯ ಹಾಳು ಮಾಡಬಾರದೆಂಬ ಉದ್ದೇಶದಿಂದ ಪ್ರತೀ ನೂರು ವಿದ್ಯಾರ್ಥಿಗಳಿಗೆ ಒಂದು ಆರೋಗ್ಯ ತಪಾಸಣಾ ಕೇಂದ್ರಗಳನ್ನು ರಚಿಸಲಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಥರ್ಮೋ ಮೀಟರ್ ಮೂಲಕ ದೇಹದ ಉಷ್ಣಾಂಶ ಪರೀಕ್ಷಿಸಿ ಸ್ಯಾನಿಟೈಸ್ ಮಾಡಿಕೊಂಡ ಬಳಿಕವಷ್ಟೆ ತಮ್ಮತಮ್ಮ ಕೊಠಡಿಗಳಿಗೆ ತೆರಳಿದ್ದಾರೆ. ಬಹುತೇಕ ಎಲ್ಲಾ ವಿದ್ಯಾರ್ಥಿಗಳು 8:45ರ ಒಳಗೆ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗಳಿಗೆ ತೆರಳಿದ್ದಾರೆ.
ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ನಡೆಸಿದರೆ, ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಪಾಲಿಸುವಂತೆ ಸೂಚನೆ ನೀಡಿದರು. ಸ್ಕೌಟ್ & ಗೈಡ್ಸ್ ನ ಶಿಕ್ಷಕರು, ರೇಂಜ್-ರೋವರ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಆಗಬಾರದೆಂಬ ಉದ್ದೇಶದಿಂದ ಬೋರ್ಡ್ ಹೈಸ್ಕೂಲು ಮೈದಾನದ ಅಲ್ಲಲ್ಲಿ ನಕ್ಷೆಯನ್ನು ಚಿತ್ರಿಸಿ ಕೊಠಡಿಗಳು ಶೀಘ್ರವಾಗಿ ಸಿಗುವಂತೆ ವ್ಯವಸ್ಥೆ ಮಾಡಿಕೊಡಲಾಗಿದೆ. ಪರೀಕ್ಷೆ ಆರಂಭಕ್ಕೂ ಮೊದಲು ಹಾಗೂ ಕೊನೆಯಲ್ಲಿ ಧ್ವನಿ ವರ್ಧಕದ ಮೂಲಕವೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಕಂಟೈನ್ ಮೆಂಟ್ ಝೋನ್ ಹಾಗೂ ಆರೋಗ್ಯದಲ್ಲಿ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಎರಡು ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಎದುರಿಸಲು ಅವಕಾಸ ಮಾಡಿಕೊಡಲಾಗಿದೆ.
ಸಾಮಾಜಿಕ ಅಂತರಕ್ಕೆ ಒತ್ತು:
ಬೋರ್ಡ್ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಕೊನೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರಕ್ಕೆ ಒತ್ತು ನೀಡದೆ ಗುಂಪು ಗುಂಪಾಗಿ ಶಾಲಾ ಮೈದಾನದಲ್ಲೇ ಚರ್ಚೆಯಲ್ಲಿ ನಿರತರಾಗಿದ್ದು ಭಾರೀ ಸುದ್ದಿಯಾಗಿದ್ದಲ್ಲದೇ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಾರಿ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಶಾಲಾ ಕಾರಿಡಾರ್ ನಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕಗಳನ್ನು ರಚಿಸಲಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಚೌಕದ ಮಧ್ಯೆಯೆ ನಿಂತು ಕೊಠಡಿಗಳಿಗೆ ತೆರಳಿದ್ದಾರೆ. ಪರೀಕ್ಷೆ ಎದುರಿಸಿ ಹೊರಗೆ ಬರುವಾಗಲೂ ಪ್ರತೀ ಇಪ್ಪತ್ತೈದು ಕೊಠಡಿಗಳಿಂದಲೂ ಒಬ್ಬೊಬ್ಬ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದರಿಂದಾಗಿ ವಿದ್ಯಾರ್ಥಿಗಳೆಲ್ಲರೂ ಗುಂಪು ಗುಂಪಾಗಿ ಹೋಗುವುದಕ್ಕೆ ಬ್ರೇಕ್ ಬಿದ್ದಿದೆ. ಮಕ್ಕಳನ್ನು ಮನೆಗೆ ಕರೆದೊಯ್ಯಲು ಬಂದ ಪೋಷಕರಿಗೂ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಪೋಷಕರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತ ದೃಶ್ಯಗಳು ಕಂಡುಬಂದವು.
ಸಾಕಷ್ಟು ಪರ-ವಿರೋಧ ಚರ್ಚೆಗಳ ನಡುವೆಯೂ ಸರ್ಕಾರ ಕೋವಿಡ್-19 ಮಾರ್ಗಸೂಚಿಯನ್ನು ಅನುಸರಿಸಿ ಅಧಿಕೃತವಾಗಿ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದು, ಸರ್ಕಾರ ಮಕ್ಕಳ ಮೇಲಿಟ್ಟಿರುವ ಕಾಳಜಿಗೆ ಪೋಷಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.