ಉಡುಪಿ ಜೂನ್ 3: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ಈ ಕುರಿತಂತೆ ನೂತನ ಲ್ಯಾಬ್ ನಿರ್ಮಾಣ ಕಾಮಗಾರಿಗಳು ಅಂತಮ ಹಂತದಲ್ಲಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ಅವರು ಬುಧವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ನಾಗರೀಕರ ಕೋವಿಡ್ ಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸುವ ಅಗತ್ಯವಿದ್ದು, ಈಗಾಗಲೇ ಮಣಿಪಾಲದ ಕೆಎಂಸಿ ಯಲ್ಲಿ ಇರುವ ಲ್ಯಾಬ್ ನ ಜೊತೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನೂತನ ಲ್ಯಾಬ್ ಆರಂಭದ ಕುರಿತಂತೆ , ಲ್ಯಾಬ್ ನ ಸಿವಿಲ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ತಿಳಿಸಿದ ಸಚಿವರು , ಮುಂದಿನ 10 ದಿನದಲ್ಲಿ ಈ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದರು.
ಜಿಲ್ಲೆಗೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್ ಬದಲು ಅವರ ಮನೆಯನ್ನೇ ಸೀಲ್ ಡೌನ್ ಮಾಡಿ ಅಲ್ಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತಂತೆ ಜಿಲ್ಲೆಯ ಶಾಸಕರು ನೀಡಿದ ಸಲಹೆಯ ಕುರಿತಂತೆ , ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಕೋವಿಡ್ 19 ನಿಯಂತ್ರಣಕ್ಕೆ ಗ್ರಾಮಮಟ್ಟದಿಂದ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್ ಗಳ ವರೆಗೂ ಕಾರ್ಯಪಡೆ ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಕೋವಿಡ್-19 ರ ಈ ಅವಧಿಯಲ್ಲಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂ ಗಳು ಮತ್ತು ಕ್ಲಿನಿಕ್ ಗಳ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುತ್ತಿರುವ ಬಗ್ಗ ಪರಿಶೀಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಡಾ. ಕೆ.ಸುಧಾಕರ್, ಕೋವಿಡ್ ಲ್ಯಾಬ್ ಗೆ ಅಗ್ಯವಿರುವ ಸಿಬ್ಬಂದಿ ಮತ್ತು ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆಯುವಂತೆ ಸೂಚಿಸಿದರು. ಜಿಲ್ಲೆಗೆ ಅಗತ್ಯವಿರುವ 2000 ಪಿಪಿಇ ಕಿಟ್ ಗಳನ್ನು ಕೂಡಲೇ ಸರಬರಾಜು ಮಾಡಲಾಗುವುದು ಎಂದರು.
ಸಭೆಯಲ್ಲಿ ಮುಜರಾಯಿ , ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ರಘುಪತಿ ಭಟ್, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಜಿಲ್ಲಾ ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಹಾಗೂ ಆರೋಗ್ಯ ಇಲಾಖೆಯ ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.