ಇನ್ನೂ ಜಗತ್ತನ್ನೇ ನೋಡದ ನನ್ನ ಗರ್ಭದಲ್ಲಿರುವ ಕಂದಮ್ಮನನ್ನು ಕೊಂದು ಬಿಟ್ಟೆಯಲ್ಲಾ!

ಗರ್ಭ ಧರಿಸಿದ ಆನೆಯೊಂದು ಮನುಷ್ಯನ ದುಷ್ಟ ಕೃತ್ಯಕ್ಕೆ ಬಲಿಯಾದ ಘಟನೆ ದೇಶವನ್ನೇ ಕಲಕುತ್ತಿದೆ.ಅನಾನಾಸ್ ನಲ್ಲಿ ಪಟಾಕಿ ಇಟ್ಟು ಆನೆಯನ್ನು ಸಾಯಿಸಿದ ದುಷ್ಟರ ಬಗ್ಗೆ ಸಹೃದಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡೀ ಘಟನೆ ಮಾನವರಿಂದ ಮುಗ್ದ ಪ್ರಾಣಿಗಳು ಹೇಗೆ ಸಂಘರ್ಷಕ್ಕೊಳಗಾಗುತ್ತವೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ. ಬರಹಗಾರ್ತಿ ಜಯಾ ಬಿ ಬರೆದ ಬರಹವನ್ನೊಮ್ಮೆ ಓದಿ. ಈ ಬರಹ ನಿಜಕ್ಕೂ ಕಣ್ಣಂಚಿನಲ್ಲಿ ನೀರು ಭರಿಸುತ್ತದೆ.ಯಾವ ಮುಗ್ದ ಪ್ರಾಣಿಗಳನ್ನು ಇನ್ನು ಮುಂದೆ ನಾವು ಬಲಿ ತಗೊಳಲ್ಲ ಎನ್ನುವ ಪ್ರತಿಜ್ಞೆ ಮಾಡೋಣ

ಕ್ಷಮಿಸಿ ಬಿಡು ಕಂದಾ..

ಅರಿವಿದೆಯೇ ಮನುಜಾ? ನೀನು ನನ್ನನ್ನಲ್ಲದೆ, ಇನ್ನೂ ಜಗತ್ತನ್ನೇ ನೋಡದ ನನ್ನ ಗರ್ಭದಲ್ಲಿರುವ ಕಂದಮ್ಮನನ್ನು ಕೊಂದು ಬಿಟ್ಟೆ! ವಾರೊಪ್ಪತ್ತಲ್ಲಿ ಕಣ್ಣು ಪಿಳಿಪಿಳಿ ಗುಟ್ಟಿಸುತ್ತ ಜನಿಸುವ ಪುಟ್ಟ ಮಗು, ಗರ್ಭದಲ್ಲಿಯೇ ಕಣ್ಮುಚ್ಚಿತು! ಆ ವೇಳೆ ಅದು ಪಟ್ಟ ಯಾತನೆ, ನನ್ನ ನರಳಾಟದ ಅರಿವು ಕಿಂಚಿತ್ತಾದರೂ ನಿನಗಿದೆಯೇ? ಬಾಯಲ್ಲಿ ಪಟಾಕಿ ಸ್ಫೋಟಗೊಂಡ ಆ ಕ್ಷಣ ನಾ ಅನುಭವಿಸಿದ ಯಾತನೆ ನಿನ್ನ ಮುಂದೆ ಅರಹುಬೇಕಿದೆ. ಸಾಧ್ಯವಾದರೆ ಕೇಳು.
ತುಂಬು ಗರ್ಭಿಣಿ ನಾ. ಮೊದಲ ತಾಯ್ತನದ ಹೆರಿಗೆಯ ಸಂಭ್ರಮದಲ್ಲಿದ್ದೆ. ಸ್ವಲ್ಪದಿನ ಕಳೆದರೆ ನನ್ನ ಪಡಿಯಚ್ಚೊಂದು ಗರ್ಭದಿಂದ ಜಾರುತ್ತಿತ್ತು. ಸಾಮಾನ್ಯವಾಗಿ ನಮಗೆ ದಿನಕ್ಕೆ ಮುನ್ನೂರು, ನಾನೂರು ಕ್ವಿಂಟಲ್ ಆಹಾರ ಬೇಕು. ಅದರಲ್ಲೂ ಗರ್ಭವತಿಯಾದ ನನಗೆ ಸಹಜವಾಗಿ ತಿನ್ನುವ ಬಯಕೆ ಜಾಸ್ತಿಯಾಗಿತ್ತು. ಕಾಡೆಲ್ಲ ಅಲೆದಾಡಿದರೂ ಸಾಕು ಎನ್ನುವಷ್ಟು ಆಹಾರ ಸಿಕ್ಕಿರಲಿಲ್ಲ. ನಾ ನಡೆದದ್ದೇ ದಾರಿ ಅನ್ನುವಂತೆ, ಅತಿಕ್ರಮಣ ಮಾಡಿಕೊಂಡಿರುವ ಕಾಡಂಚಿನ ಜಾಗಕ್ಕೆ ಆಹಾ ಅರಸಿ ಬಂದಿದ್ದೆ.
ನಡೆದು ನಡೆದು ಗ್ರಾಮವೊಂದರ ಬೀದಿ ಪ್ರವೇಶಿಸಿದೆ. ಒಂದಿಷ್ಟು ಮಂದಿ ಬಾಳೆ ಹಣ್ಣು, ಅಕ್ಕಿ, ತರಕಾರಿಯನ್ನೆಲ್ಲ ಕೊಟ್ಟರು. ಯಾರೋ ಒಬ್ಬಾತ ಮಾಗಿರುವ ಅನಾನಸ್ ಹಣ್ಣುಗಳನ್ನು ಕೊಟ್ಟು ಹೋದ. ಮೊದಲು ಒಂದೆರಡು ಹಣ್ಣು ತಿಂದು ಹೊಟ್ಟೆಗೆ ಇಳಿಸಿದ್ದೆ. ಕೊನೆಯ ಹಣ್ಣನ್ನು ಸೊಂಡಿಲಿನಿಂದ ಎತ್ತಿ, ಬಾಯಿಗೆ ಹಾಕಿಕೊಂಡದ್ದಷ್ಟೇ!! ಅರೆ ಕ್ಷಣದಲ್ಲಿ ಅಲ್ಲಿಯೇ ಸ್ಫೋಟವಾಯ್ತು! ಬಾಯೆಲ್ಲ‌ ರಕ್ತ ಸಿಕ್ತ.
ನಾಲಿಗೆ ಸಂಪೂರ್ಣ ಸುಟ್ಟಕರಕಲಾಗೋಯ್ತು. ಒಂದೆಡೆ ನೋವಿನ ನರಕ ಯಾತನೆ, ಇನ್ನೊಂದೆಡೆ ಹಸಿವಿನ ಸಂಕಟ! ಮತ್ತೊಂದೆಡೆ ಗರ್ಭದಲ್ಲಿರುವ ಪುಟ್ಟ ಕಂದನ ಒಳಬೇಗುದಿ!! ಹಸಿವೆಯೆಂದು ತಿನ್ನಬೇಕೆಂದರೂ ನಾಲಿಗೆಯೇ ಇಲ್ಲ. ಗಾಯದ ಉರಿ ತಡೆಯಲಾಗದೆ, ಊರೆಲ್ಲ ಓಡಾಡಿದೆ. ಸಹಿಸಲಾಗದ ಅಸಾಧ್ಯ ನೋವು. ನನ್ನ ಮೂಕ ವೇದನೆ ಆ ಕ್ಷಣ ಯಾರಿಗೆ ತಾನೆ ಅರ್ಥವಾದೀತು?
ಇಲ್ಲ, ಸಾಧ್ಯವಾಗುತ್ತಿಲ್ಲ… ಕ್ಷಣ ಕ್ಷಣಕ್ಕೂ ಉರಿ ಹೆಚ್ಚುತ್ತಲೇ ಹೋಗುತ್ತಿತ್ತು. ಅಲ್ಲಿಯೇ ಅನತಿ ದೂರದಲ್ಲಿರುವ ನದಿಗೆ ಇಳಿದು, ಮಧ್ಯ ಹೋಗಿ ನಿಂತೆ. ಐದಾರು ಬಾರಿ ಸಂಪೂರ್ಣ ಮುಳುಗು ಹಾಕಿದೆ. ಸ್ವಲ್ಪ ಸಮಾಧಾನದ ಭಾವ. ಸಮಯ ಹಾಗೆ ಉರುಳುತ್ತಲೇ ಇತ್ತು!
ಮತ್ತೆ ಸುರುವಾಯ್ತು ಹಸಿವೆ. ಗರ್ಭ ಧರಿಸಿದಾಗ ಹಸಿವೆ ದುಪ್ಪಟ್ಟಾಗುತ್ತದೆ. ತಿನ್ನುವ ಬಯಕೆ ಹೆಚ್ಚುತ್ತಾ ಹೋಗುತ್ತದೆ. ನದಿಯಿಂದ ಮೇಲೆ ಬಂದು ಏನಾದರೂ ತಿನ್ನೋಣವೆಂದರೂ ನಾಲಿಗೆಯೇ ಇಲ್ಲ! ಬಾಯೆಲ್ಲ ಹರಿದ ಮಾಂಸದ ಮುದ್ದೆ!! ಏನು ಮಾಡಬೇಕೆಂದು ತಿಳಿಯದೆ ನೀರಲ್ಲಿಯೇ ಕಳೆದೆ!ಸ್ವಲ್ಪ ಸಮಯದ ನಂತರ ನನ್ನವರನ್ನ ಕರೆಸಿ, ನೀರಿನಿಂದ ಮೇಲೆ ಕರೆತರಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ನನಗೆ ಅರಿವಾಗಿತ್ತು, ಇನ್ನು ಕೆಲವು ನಿಮಿಷಗಳಷ್ಟೇ ನನ್ನ ಇರುವಿಕೆಯೆಂದು! ಅದಾಗಲೇ ಗರ್ಭದಲ್ಲಿರುವ ನನ್ನ ಪುಟ್ಟ ಕಂದಮ್ಮಗೆ ಹೇಳಿದ್ದೆ:
‘ಕ್ಷಮಿಸು ಕಂದಾ, ಕಣ್ಬಿಡುವ ಮೊದಲೇ ನೀನು ಕಣ್ಮುಚ್ಚುತ್ತಿದ್ದೀಯ. ತಾಯ್ತನದ ಸೌಭಾಗ್ಯ ನನಗಿಲ್ಲದಿದ್ದರೂ, ಈ ಕ್ರೂರ ಜಗತ್ತನ್ನು ನೀನು ನೋಡುತ್ತಿಲ್ಲವಲ್ಲ ಎನ್ನುವ ಸಮಾಧಾನವಿದೆ. ಹಸಿವು ನೀಗಿಸುವ ನೆಪದಲ್ಲಿ ವಿಷವಿಕ್ಕುವ ಜಗಕ್ಕೆ ನಿನ್ನ ಕರೆತಂದೆನಲ್ಲ ಅನ್ನುವ ಪಾಪ ಪ್ರಜ್ಞೆಯಿಂದ‌ ನಾ ದೂರವಾಗಿದ್ದೇನೆ. ನಮ್ಮದಲ್ಲ ಈ ಜಗತ್ತಲ್ಲಿ ಕ್ರೂರಿಗಳೇ ವಾಸಿಸಲಿ…’
ಕೊನೆಯದಾಗಿ…. ತಾಯ್ತನ ಕಸಿದ, ಗರ್ಭದಲ್ಲಿರುವ ಕಂದಮ್ಮನ ಬಲಿ ಪಡೆದ ನೀ ಸುಖವಾಗಿರು ಮನುಜ, ಸುಖವಾಗಿರು…
-ನೊಂದ ಆತ್ಮ