ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದ 150 ಮಂದಿಯಲ್ಲಿ ಇಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ ಅವರು, ಇಂದು ಪತ್ತೆಯಾದ 150 ಸೋಂಕಿತರ ಪೈಕಿ 10 ವರ್ಷದೊಳಗಿನ 9 ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ವೃದ್ದರು ಮೂರು ಮಂದಿ ಇದ್ದಾರೆ. 120 ಪುರುಷರು ಹಾಗೂ 30 ಮಂದಿ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
1120 ಬೆಡ್ ಗಳ ವ್ಯವಸ್ಥೆ
ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 1120 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 410 ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 60 ಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 900 ಬೆಡ್ ಗಳು ಖಾಲಿ ಇದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದಿದ್ದಾರೆ.
ಜಿಲ್ಲೆಯ ಜನರಿಗೆ ಭಯ ಬೇಡ:
ನಿನ್ನೆ ಮತ್ತು ಇಂದು 2 ಸಾವಿರ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದರಿಂದ 150 ಪ್ರಕರಣ ಕಾಣಿಸಿಕೊಂಡಿದೆ. ಈ ಹಿಂದೆ 200ರಿಂದ 300 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆಗ 10 ರಿಂದ 15 ಕೇಸ್ ಗಳು ಪತ್ತೆಯಾಗುತ್ತಿದ್ದವು. ಅಲ್ಲದೆ,
ಮಹಾರಾಷ್ಟ್ರದಿಂದ ಆಗಮಿಸುವವರ ಪೈಕಿ ಶೇ. 10ರಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರನ್ನು ಕ್ವಾರಂಟೈನ್ ಮಾಡಿ, ಸೂಕ್ತ ಪರೀಕ್ಷೆ ನಡೆಸಿ ಮನೆಗೆ ಕಳುಹಿಸಲಾಗುತ್ತಿದೆ. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.