ಬೆಂಗಳೂರು: ಜೂನ್ 18ರಂದು ವಿದ್ಯಾರ್ಥಿಗಳಿಗೆ ನಡೆಯಲಿರುವ ಪಿಯುಸಿ ಇಂಗ್ಲಿಷ್ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿನಿಲಯ ವಾಸಿಗಳಾಗಿದ್ದವರಿಗೆ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಸಮೀಪದ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೋಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿವರವನ್ನು ಶೀಘ್ರದಲ್ಲೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು:
ಪರೀಕ್ಷೆ ಬರೆಯುವ ಒಟ್ಟು 16,229 ವಿದ್ಯಾರ್ಥಿಗಳು ಬದಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಇಚ್ಛೆ ವ್ಯಕ್ತಪಡಿಸಿದ್ದು, ಅವರಿಗೆ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುವುದು. ಹಾಗೂ ಅದರ ವಿವರವನ್ನು ಶೀಘ್ರದಲ್ಲೆ ಪಿಯು ಮಂಡಳಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಹೊರ ರಾಜ್ಯದ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದು, ಅವರ ಇಚ್ಛೆಯಂತೆ ಆ ರಾಜ್ಯದ ಗಡಿ ಭಾಗದ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಗಡಿಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ:
ಗಡಿಭಾಗವಾದ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು, ಗಡಿಭಾಗದಿಂದ ಪರೀಕ್ಷಾ ಕೇಂದ್ರಕ್ಕೆ ಮತ್ತು ಪರೀಕ್ಷೆ ಸಮಯದ ನಂತರ ಗಡಿ ಭಾಗದವರೆಗೆ ಬಸ್ ವ್ಯವಸ್ಥೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಪಿಯು ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಿಗದಿತ ಅವಧಿಯಲ್ಲಿ ಮೌಲ್ಯ ಮಾಪನ ಪ್ರಕ್ರಿಯೆ ಪೂರ್ಣ:
ರಾಜ್ಯದ ಎಂಟು ಜಿಲ್ಲೆ, 34 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿವಿಧ ವಿಷಯಗಳ ಮೌಲ್ಯ
ಮಾಪನ ಪ್ರಕ್ರಿಯೆಯನ್ನು ಸುಮಾರು 6,500 ಉಪನ್ಯಾಸಕರು ತೊಡಗಿಸಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಮೌಲ್ಯ
ಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.