ಉಡುಪಿ: ಹೊರರಾಜ್ಯದಿಂದ ಉಡುಪಿಗೆ ಬಂದಿರುವ 16 ಮಕ್ಕಳು ಸೇರಿದಂತೆ ಒಟ್ಟು 27 ಮಂದಿಯಲ್ಲಿ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ವಿಡಿಯೋ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇಂದು 199 ಮಂದಿಯ ಕೊರೊನಾ ಪರೀಕ್ಷಾ ವರದಿ ಬಂದಿದ್ದು, ಅದರಲ್ಲಿ 27 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸೋಂಕಿತರ ಪೈಕಿ ಮುಂಬೈಯಿಂದ 23, ತೆಲಂಗಾಣದಿಂದ 3 ಹಾಗೂ ಕೇರಳದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರು ಒಳಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಸೋಂಕಿತರಲ್ಲಿ ಪುರುಷರು 6, ಮಹಿಳೆಯರು 5 ಹಾಗೂ 16 ಮಕ್ಕಳು ಇದ್ದಾರೆ. ಇಬ್ಬರು ಸೋಂಕಿತರು ಕಾರವಾರದ ಕ್ವಾರಂಟೈನ್ ನಲ್ಲಿ ಇರುವುದರಿಂದ ಅವರನ್ನು ಕಾರವಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಎಲ್ಲ 25 ಸೋಂಕಿತರನ್ನು ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.