ಡಬ್ಬಲ್ ಶರ್ಟ್ ಹಾಕಿಕೊಂಡು ಓಡಾಡುವ ಆಟೋ ಡ್ರೈವರ್ ಗಳಿಗೆ ಬೀಳಲಿದೆ ದಂಡದ ಬರೆ.!

ಉಡುಪಿ: ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್  ಓಪನ್ ಬಿಟ್ಟುಕೊಳ್ಳುವುದು ಒಂದು ಟ್ರೆಂಡ್ ಆಗಿತ್ತು. ಇದೀಗ ಉಡುಪಿಯಲ್ಲಿ ಆಟೋ ಚಾಲಕರಿಗೆ ಇದೇ ಟ್ರೆಂಡ್ ದಂಡ ಕಟ್ಟಲು ಆಹ್ವಾನ ನೀಡುತ್ತಿದೆ.
ಸಿನಿಮಾ ಹಿರೋಗಳ ಸ್ಟೈಲ್ ನಲ್ಲಿ ರೋಡ್ ಗೆ ಇಳಿಯುತ್ತಿದ್ದ ಆಟೋ ಚಾಲಕರಿಗೆ ಉಡುಪಿಯಲ್ಲಿ ಇನ್ಮುಂದೆ ಪೊಲೀಸರಿಂದ ದಂಡದ ಬರೆ ಬೀಳುತ್ತೆ. ಉಡುಪಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‌ಗಳಿಗೆ ಕಾನೂನಿನ ಪಾಠ ಮಾಡುತ್ತಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಪ್ರಕಾರ ಆಟೋ ಚಾಲಕರು ಕೇವಲ ಒಂದು ಖಾಕಿ ಶರ್ಟ್ ಮಾತ್ರ ಧರಿಸಿರಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಡಬ್ಬಲ್ ಶರ್ಟ್ ಹಾಕಿಕೊಂಡು ಮೋಟಾರು ಕಾಯ್ದೆ ಉಲ್ಲಂಘಿಸುವವರನ್ನು ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ರಿಕ್ಷಾದಿಂದ ಇಳಿಸಿ ಬಟನ್ ಹಾಕಿಸಿ ಬುದ್ಧಿ ಮಾತು ಹೇಳಿ ಕಳುಹಿಸುತ್ತಿದ್ದಾರೆ.
ಈಗಾಗಲೇ ಹೆಲ್ಮೆಟ್, ಸೀಟ್ ಬೆಲ್ಟ್ ಗಳನ್ನು ಹಾಕದವರಿಗೆ ಪೊಲೀಸರು ಫೈನ್ ಹಾಕುತ್ತಿದ್ದಾರೆ. ನಾಳೆಯಿಂದ (ಮೇ 6) ಡಬ್ಬಲ್ ಶರ್ಟ್ ಹಾಕುವವರಿಗೆ 500 ರೂಪಾಯಿ ದಂಡ ಹಾಕುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.