ಕುಂದಾಪುರ: ಸೋಮವಾರದಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಷರತ್ತುಬದ್ದ ಅನುಮತಿ ನೀಡಿದ ಪರಿಣಾಮ ಮದ್ಯ ಪ್ರಿಯರು ಮದ್ಯದಂಗಡಿಗಳೆದುರು ಸರಕಾರದ ಆದೇಶಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯಕ್ಕಾಗಿ ಮುಗಿಬಿದ್ದಿದ್ದಾರೆ.
ಕಳೆದ ನಲವತ್ತು ದಿನಗಳಿಂದ ಮದ್ಯವಿಲ್ಲದೆ ಪರದಾಡುತ್ತಿದ್ದ ಮದ್ಯ ಪ್ರಿಯರು ಸರಕಾರ ಹೊರಡಿಸಿರುವ ಆದೇಶಕ್ಕೆ ಸಂತಸ ವ್ಯಕ್ತಪಡಿಸಿ ಮದ್ಯದಂಗಡಿಗಳ ಎದುರು ಅರ್ಧ ಕಿಲೋಮೀಟರಿಗೂ ಅಧಿಕ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ ದೃಶ್ಯ ಕಂಡುಬಂದಿತು. ಆರಂಭದಲ್ಲಿ ಹನಿ-ಹನಿ ಮಳೆ ಸುರಿದರೂ ಬಳಿಕ ಬಿಸಿಲ ಝಳದ ನಡುವೆಯೂ ಬಹುತೇಕ ಮದ್ಯ ಪ್ರಿಯರು ಹರಸಾಹಸಪಟ್ಟು ಮದ್ಯ ಖರೀದಿಸಿ ಮನೆಗೆ ತೆರಳಿದರು.
ಕುಂದಾಪುರದ ತುಂಬೆಲ್ಲಾ ವಾಹನ ದಟ್ಟಣೆ:
ಬೆಳಿಗ್ಗೆ ೯ ಗಂಟೆಯಿಂದ ಮದ್ಯದ ಅಂಗಡಿಗಳು ಆರಂಭವಾಗಿದ್ದು ಮುಂಜಾನೆಯೇ ಬಂದ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯಕ್ಕೆ ಮುಗಿಬಿದ್ದರು. ಕ್ಷಣ ಕಾಲದಲ್ಲೇ ಸರತಿಸಾಲು ಮೀಟರುಗಟ್ಟಲೇ ಉದ್ದವಾಗಿ ಬೆಳೆಯಿತು. ಒಂದೆಡೆ ನಿತ್ಯ ಬಳಕೆ ವಸ್ತುಗಳನ್ನು ಪಡೆಯಲು ಬೆಳಿಗ್ಗೆ ೯ ರಿಂದ ೧ ಗಂಟೆಯವರೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆ ಸಾಮಾಗ್ರಿ ಕೊಂಡುಕೊಳ್ಳುವರು, ಆಸ್ಪತ್ರೆ, ಮೆಡಿಕಲ್ ವಿಚಾರದಲ್ಲಿ ಬಂದವರು ಮಾತ್ರವಲ್ಲದೆ ಒನ್ ಟೈಮ್ ಪಾಸ್ಗಾಗಿ ಸರಕಾರಿ ಕಚೇರಿಗಳಿಗೆ ಬರುವರ ಸಂಖ್ಯೆಯೂ ಅಧಿಕವಾಗಿದ್ದು, ಬೆಳಿಗ್ಗೆ ೧೦ ಗಂಟೆ ತನಕವೂ ಕುಂದಾಪುರ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಅಸ್ತವ್ಯಸ್ತವಾಯಿತು.
ಕುಂದಾಪುರ ನಗರ ಠಾಣೆ ಸಿಬ್ಬಂದಿಗಳನ್ನು ಮದ್ಯದಂಗಡಿ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಬೆರಳೆಣಿಕೆಯ ಟ್ರಾಫಿಕ್ ಸಿಬ್ಬಂದಿಗಳು ಆಯಕಟ್ಟಿನ ಸ್ಥಳದಲ್ಲಿದ್ದರಿಂದ ಟ್ರಾಫಿಕ್ ಸುಧಾರಣೆ ಹತೋಟಿಗೆ ತರುವುದು ಅವರಿಗೆ ಕಷ್ಟದಾಯಕವಾದ ದೃಶ್ಯ ಕಂಡುಬಂತು. ಕೊನೆಗೂ ಕುಂದಾಪುರ ನಗರಕ್ಕೆ ಸಂಪರ್ಕಿಸುವ ಶಾಸ್ತ್ರಿ ವೃತ್ತ ಬಳಿಯ ಇನ್ನೊಂದು ಮಾರ್ಗ ತೆರವು ಮಾಡಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಳಿಕ ಸಂಚಾರ ದಟ್ಟಣೆ ಸುಧಾರಿಸಿತು.
ಸ್ಟಾಕ್ ಇಲ್ಲ: ಪಾನಪ್ರಿಯರಿಗೆ ನಿರಾಸೆ!
ತಿಂಗಳುಗಟ್ಟಲೆಯಿಂದ ಮದ್ಯದಂಗಡಿ ಬಂದ್ ಹಿನ್ನೆಲೆ ಬಹುತೇಕ ಕಡೆಗಳಲ್ಲಿ ಮದ್ಯ ಪ್ರಿಯರಿಗೆ ಬೇಕಾದ ಬ್ರ್ಯಾಂಡ್ ಸಿಗಲಿಲ್ಲ. ಅಲ್ಲದೇ ೯ ರಿಂದ ಮಧ್ಯಾಹ್ನ ೧ ಗಂಟೆ ಅಂದರೆ ನಾಲ್ಕು ಗಂಟೆಗಳ ಕಾಲ ಮಧ್ಯದ ಅಂಗಡಿ ತೆರೆದಿದ್ದು ಮದ್ಯ ಪ್ರಿಯರು ಸಾಕಷ್ಟು ಗಂಟೆಗಳ ಕಾಲ ಸರತಿ ಸಾಲಿನಲ್ಲೇ ನಿಂತ ಹಿನ್ನೆಲೆ ಮಧ್ಯಾಹ್ನ ಅಂಗಡಿ ಮುಚ್ಚುವ ಹೊತ್ತಿಗೆ ಬಹುತೇಕರಿಗೆ ಮದ್ಯ ಸಿಗಲೇ ಇಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾದು ಸುಸ್ತಾದ ಮದ್ಯಪ್ರಿಯರು ಕೊನೆಗೂ ಸಪ್ಪೆ ಮೋರೆ ಹಾಕಿ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮದ್ಯಪ್ರಿಯರ ನಡುವೆ ಗಲಾಟೆ:
ಕೆಲವರು ಸರತಿ ಸಲಾಇನಲ್ಲಿ ನಿಲ್ಲದೇ ನೇರವಾಗಿ ಬಂದು ಮದ್ಯ ಖರೀದಿಸಿದ ಪರಿಣಾಮ ನಸುಕಿನ ಜಾವದಿಂದಲೇ ಸರತಿಯಲ್ಲಿ ನಿಂತಿದ್ದ ಮದ್ಯ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದರು. ಬಹುತೇಕ ಕಡೆಗಳಲ್ಲಿ ಸರತಿ ಸಾಲಿನ ವಿಚಾರದಲ್ಲಿ ಆಗಾಗೆ ಮದ್ಯ ಪ್ರಿಯರ ನಡುವೆ ಗಲಾಟೆಗಳು ಉಂಟಾಯಿತು.
ಶಟರ್ ಎತ್ತಿ ನುಗ್ಗಿದರು!:
ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ರವರೆಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಒಂದು ಗಂಟೆಯಾಗುತ್ತಿದ್ದಂತೆಯೇ ಪೊಲೀಸರು ಮದ್ಯದಂಗಡಿಗಳ ಮಾಲೀಕರಿಗೆ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ಸಿಬ್ಬಂದಿಗಳು ಶಟರ್ ಎಳೆದರು. ಆದರೂ ಸಾಲಿನಲ್ಲಿ ನಿಂತಿದ್ದ ಮದ್ಯ ಪ್ರಿಯರು ಅಂಗಡಿಯ ಶಟರ್ ಎತ್ತಿ ಒಳಗಡ ನುಗ್ಗಿದ ದೃಶ್ಯ ನಗರದ ವೈನ್ ಶಾಪ್ವೊಂದರಲ್ಲಿ ನಡೆದಿದೆ. ಬಳಿಕ ಪೊಲೀಸ್ ಸಿಬ್ಬಂದಿ ಒಳಗೆ ಹೋಗಿ ಆತನನ್ನು ಹೊರ ಕರೆದು ತಂದ ಪ್ರಸಂಗವೂ ನಡೆಯಿತು.
ಪೊಲೀಸರ ಹರಸಾಹಸ:
ಮದ್ಯದಂಗಡಿಗಳ ಎದುರಿನಿಂದ ಆರಂಭಿಸಿ ಮೀಟರುಗಟ್ಟಲೆ ದೂರ ಜನರು ಸರತಿ ಸಾಲಿನಲ್ಲಿ ನಿಂತಿದ್ದು ಟ್ರಾಫಿಕ್ ಸಮಸ್ಯೆ ಸಹಿತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆ ಕುಂದಾಪುರ ನಗರ ಠಾಣೆ ಪಿಎಸ್ಐ ಹರೀಶ್ ಆರ್ ಹಾಗೂ ಸಿಬ್ಬಂದಿಗಳು ನಗರದಲ್ಲಿ ತೆರೆದ ಮದ್ಯದಂಗಡಿಗಳ ಬಳಿ ತೆರಳಿ ಮದ್ಯ ಪ್ರಿಯರನ್ನು ನಿಯಂತ್ರಿಸುವಲ್ಲಿ ಶ್ರಮವಹಿಸಿದರು. ಅಂತರ ಪಾಲನೆ, ಟ್ರಾಫಿಕ್ ವ್ಯವಸ್ಥೆ ಬಗ್ಗೆ ನಗರ ಠಾಣೆ ಪೊಲೀಸರೇ ಮುತುವರ್ಜಿ ವಹಿಸಿ ಕೆಲಸ ಮಾಡಿರುವುದು ಕಂಡುಬಂತು.