ಉಡುಪಿ, ಮೇ 4: ರೈತರಿಗೆ ವಿತರಿಸಲಾಗುವ ಭಿತ್ತನೆ ಬೀಜ, ಕೀಟನಾಶಕಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು , ಈ ಕುರಿತಂತೆ, ಭಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾದರಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯಗಳ ಮೂಲಕ ಪರೀಕ್ಷಿಸಿ, ರೈತರಿಗೆ ಉತ್ತಮ ಗುಣಮಟ್ಟದ ಭಿತ್ತನೆ ಬೀಜಗಳು ದೊರೆಯುವಂತೆ ಮಾಡಬೇಕು ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.
ರಾಜ್ಯದಲ್ಲಿ ಕೋವಿಡ್-19 ಆವರಿಸಿರುವ ಕಾರಣ , ಅವರು ಸೋಮವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ಜಿಲ್ಲೆಯಲ್ಲಿ ಬೀಜ ರಸಗೊಬ್ಬರಗಳ ಲಭ್ಯತೆ ಮತ್ತು ಕೃಷಿ ಉತ್ಪನ್ನಗಳ ಸರಕು ಸಾಗಾಗಣಿಕೆ ಬಗ್ಗೆ, ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ವಿವಿಧ ಮಳಿಗೆಗಳಲ್ಲಿ ವಿತರಿಸಲಾಗುವ ಭಿತ್ತನೆ ಬೀಜ, ಕೀಟನಾಶಕನ್ನು ಪರೀಕ್ಷಿಸಿ, ಕಳಪೆ ಗುಣಮಟ್ಟದ ಭಿತ್ತನೆ ಬೀಜ, ಅವಧಿ ಮೀರಿದ ಕೀಟನಾಶಕಗಳನ್ನು ಸರಬರಾಜು ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸಚಿವ ಬಿ.ಸಿ .ಪಾಟೀಲ್ ಸೂಚಿಸಿದರು.
ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಯಂತ್ರೋಪಕರಣ ಬೆಲೆ ಮತ್ತು ಮಾರುಟ್ಟೆಯಲ್ಲಿರುವ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಇಲಾಖೆಗೆ ಸಬ್ಸಿಡಿ ದರದಲ್ಲಿ ಸರಬರಾಜು ಮಾಡುವ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡಿಸಲು ಮತ್ತು ಯಂತ್ರೋಪಕರಣ ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ಹಾಕುವ ಕುರಿತಂತೆ ಪರಿಶೀಲನೆ ನಡೆಸಲಾಗುವುದು ಎಂದು ಬಿ.ಸಿ .ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ಕೋವಿಡ್-19 ಅವಧಿಯಲ್ಲಿ ರೈತರು ಮತ್ತು ಅವರು ಬೆಳದ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಕೃಷಿಗೆ ಪೂರಕವಾಗುವ ಸರ್ಕಾರವು ಕ್ರಮಗಳನ್ನು ಕೈಗೊಂಡಿದೆ, ರೈತರು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಉಡುಪಿ ಜಿಲ್ಲೆಗೆ ಸಂಬಂದಿಸಿದಂತೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಿಳಿಸಿದಂತೆ, ಕೃಷಿಕರ ಬೆಳೆಗೆ ಕಾಡುಪ್ರಾಣಿಗಳಿಂದ ಹಾವಳಿಯಾಗುತ್ತಿರುವ ಕುರಿತಂತೆ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಶಾಸಕ ರಘುಪತಿಭಟ್ ತಿಳಿಸಿದಂತೆ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಪ್ರಾರಂಬಿಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸಚಿವರು ಹೇಳಿದರು.
ಉಡುಪಿ ಜಿಲ್ಲೆಯ ವಿವಿಧ ರೈತರ ಸಂಘಟನೆಗಳ ಮುಖಂಡರು ಕೋರಿದಂತೆ, ಎಪಿಎಂಸಿ ಯಲ್ಲಿ 1.5% ತೆರಿಗೆ ರದ್ದುಗೊಳಿಸುವುದು, ಜಿಲ್ಲೆಯಲ್ಲಿ ಭತ್ತದ ಬೆಂಬಲ ಬೆಲೆಯನ್ನು ಸಾಕಷ್ಟು ಮುಂಚಿತವಾಗಿ ಘೋಷಣೆ ಮಾಡುವುದು, ಕೋಲ್ಡ್ ಸ್ಟೋರೇಜ್ ಸ್ಥಾಪನೆ , ಭತ್ತದ ಬೆಳೆಗೆ ಮೆಳ ಆಧಾರಿತ ಸಿರಿದಾನ್ಯಗಳಿಗೆ ನೀಡುವ ರೀತಿಯಲ್ಲಿ ಪ್ರೋತ್ಸಾಹಧನ ನೀಡುವುದು, ಬೆಳೆ ವಿಮೆಯಲ್ಲಿ ಗೊಂದಲಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಸಮಸ್ಯೆ ಇಲ್ಲ, ಇದುವರೆಗೆ 49 ಮಿಮೀ ಮಳೆ ಆಗಿದ್ದು, ಜಿಲ್ಲೆಯಲ್ಲಿ 36000 ಹೆಕ್ಟರ್ ನಲ್ಲಿ ಭತ್ತ ಬೆಳಯಲಾಗುತ್ತಿದ್ದು, ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮ ನಡೆಯುತ್ತಿದೆ, ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿದ 134244 ಮಂದಿಗೆ ರೂ.2000 ದಂತೆ ಹಣ ವಿತರಿಸಲಾಗಿದೆ. ಕೋವಿಡ್-19 ಅವಧಿಯಲ್ಲಿ ಜಿಲ್ಲೆಯಲ್ಲಿನ ಕೃಷಿ ಬೆಳೆಗಳಿಗೆ ಹಾನಿಯಾಗದಂತೆ ಸಾಗಾಟ ಮತ್ತು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು, ರೈತರಿಗೆ ಕೋವಿಡ್ 19 ಕುರಿತು ಅರಿವು ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಅರಿವು ಮೂಡಿಸಿದು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು , ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಒ ಪ್ರೀತಿ ಗೆಹಲೋತ್ ಉಪಸ್ಥಿತರಿದ್ದರು.
ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.