ಮಂಗಳೂರು: ಇಂದಿನಿಂದ ಲಾಕ್ ಡೌನ್ ಕೊಂಚ ಸಡಿಲಿಕೆ: ನಿಯಮ ಪಾಲಿಸಲು ಸೂಚನೆ

ಮಂಗಳೂರು: ಕೊರೊನಾ ಭೀತಿಯಿಂದ ‌ಕಟ್ಟುನಿಟ್ಟಿನ‌ ಲಾಕ್ಡೌನ್ ಆಗಿದ್ದ ಕಡಲ ನಗರಿ‌ ಮಂಗಳೂರಿನಲ್ಲಿ ಇಂದಿನಿಂದ ಸ್ವಲ್ಪ ಮಟ್ಟಿನ‌ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ‌. ರೂಪೇಶ್ ಅಧಿಕೃತ ಆದೇಶದಂತೆ ಬೆಳಗ್ಗೆ 7ರಿಂದ ರಾತ್ರಿ 7ರ ವರೆಗೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಆಟೋ ರಿಕ್ಷಾ, ಕ್ಯಾಬ್ ಸಂಚಾರಕ್ಕೆ ಅನುಮತಿ ದೊರೆತಿದೆ.
ಆಟೋ ಮತ್ತು ಕ್ಯಾಬ್ ಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಖಾಸಗಿ ವಾಹನಗಳಾದ ಬೈಕ್ ಮತ್ತು ಕಾರುಗಳ ಸಂಚಾರಕ್ಕೆ ಅನುಮತಿ ಇದೆ. ಆದರೆ ಕಾರುಗಳಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಮತ್ತು ಬೈಕ್ ಗಳಲ್ಲಿ ಒಬ್ಬರಷ್ಟೇ ಪ್ರಯಾಣಿಸಲು ಅನುಮತಿ ಸಿಕ್ಕಿದೆ. ಸ್ಥಳೀಯ ಅಂಗಡಿಗಳು,ವಸತಿ ಸಂಕೀರ್ಣಗಳ ಶಾಪ್, ಸಣ್ಣಪುಟ್ಟ ಶಾಪ್ ಗಳಲ್ಲಿ ಅಗತ್ಯ ವಸ್ತುಗಳ ಶಾಪ್ ತೆರೆಯಲಷ್ಟೇ ಅನುಮತಿ ನೀಡಲಾಗಿದೆ. ಖಾಸಗಿ ಸಂಸ್ಥೆ ಮತ್ತು ಕಚೇರಿಗಳಲ್ಲಿ 33% ಸಿಬ್ಬಂದಿ ಬಳಸಿ ಕೆಲಸಕ್ಕೆ ಅನುಮತಿ ನೀಡಿ ಅಗತ್ಯ ಸೇವೆಗಳಿಗೆ ಇ-ಕಾಮರ್ಸ್ ಸಂಸ್ಥೆಗಳಿಗೆ ಅವಕಾಶವಿದೆ.
ಸ್ಥಳದಲ್ಲಿದ್ದ ಕಾರ್ಮಿಕರ ಬಳಸಿಕೊಂಡು ಅಗತ್ಯ ಕಟ್ಟಡ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ.‌ ಆದರೆ ಹೊರಗಿನಿಂದ ಕಾರ್ಮಿಕರು ಬರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನೂ ‌ಇಂದಿನಿಂದ ಮದ್ಯ ಮಾರಾಟಕ್ಕೆ ಷರತ್ತು ವಿಧಿಸಿ ಅನುಮತಿ ನೀಡಿದ ದ.ಕ. ಜಿಲ್ಲಾಡಳಿತ, ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ಓಪನ್ ಮಾಡಬಹುದಾಗಿದೆ. ವೈನ್ ಶಾಪ್ ಗಳಲ್ಲಿ ಮೂವರು ಮಾತ್ರ ಸಿಬಂದಿ ಇರಬೇಕು. ಮದ್ಯ ಮಳಿಗೆಯ ಒಳಗೆ ಐವರು, ಹೊರಗೆ ಐವರು ಗ್ರಾಹಕರಿಗೆ ಅವಕಾಶ ಅಂಗಡಿ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಾವಲು ಹಾಕಬೇಕು ಇಬ್ಬರು ಭದ್ರತಾ ಸಿಬಂದಿ ಅಳವಡಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.. ಅಲ್ಲದೇ ಜನರು ಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ.