ಮಂಗಳೂರು: ನಗರದ ಪ್ರಮುಖ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಿರುವ ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಕೋವಿಡ್ 19 ಮಾದರಿ ಸಂಗ್ರಹಣಾ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವೈರಾಣು ಸೋಂಕಿತರು ಹೆಚ್ಚಾಗುತ್ತಿರುವ ವಿದ್ಯಮಾನಗಳು ಆಘಾತಕಾರಿಯಾಗಿದೆ. ಈಗಾಗಲೇ ಅನೇಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಅದಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ತಕ್ಷಣವೇ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ. ನಿರ್ಮಿತಿ ಕೇಂದ್ರದ ಪ್ರಮುಖರಾದ ರಾಜೇಂದ್ರ ಕಲ್ಬಾವಿಯವರ ನೇತೃತ್ವದಲ್ಲಿ ಈ ಮಾದರಿ ಸಂಗ್ರಹಣಾ ಕೇಂದ್ರವನ್ನು ನೀಡಿದ ಅವರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಬೇಕೆಂದು ಶಾಸಕ ಕಾಮತ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಾಣು ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಸಶಕ್ತವಾಗಿ ಕಾರ್ಯ ತಂತ್ರ ರೂಪಿಸುತ್ತಿದೆ. ಆದರೆ ಕರಾವಳಿಯ ಪ್ರಜ್ಞಾವಂತ ನಾಗರಿಕರು ತಮ್ಮ ಜವಬ್ದಾರಿಯನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ನಿರಂತರವಾಗಿ ಕೋವಿಡ್ 19 ವಿರುದ್ಧ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಅವರ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು. ಹಾಗೂ ಅವರಿಗೆ ಕೃತಜ್ಞತಾ ಭಾವ ತೋರುವ ಮಾನಸಿಕತೆ ನಮ್ಮಲ್ಲಿರಬೇಕೆಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.