ಕುಂದಾಪುರ: ಕಳೆದ ಒಂದು ತಿಂಗಳಿನಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ದರೆ, ಇವರು ಬೀದಿಯಲ್ಲಿದ್ದಾರೆ. ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ. ಮನೆ ಮನೆ ಹತ್ತಿಳಿಯುತ್ತಿದ್ದಾರೆ. ದಯಮಾಡಿ ಮನೆಯಿಂದ ಹೊರ ಬರಬೇಡಿ. ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಮೊರೆಯಿಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಸುಡುಬಿಸಿಲಿನಲ್ಲಿಯೂ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವೈಖರಿಯಿದು.
ಕೊರೋನಾ ವಿರುದ್ಧ ಶಕ್ತಿಯುತ ಹೆಜ್ಜೆ:
ಕುಂದಾಪುರ ಉಪವಿಭಾಗದ ಬೈಂದೂರು ಮತ್ತು ಕುಂದಾಪುರ ತಾಲೂಕಿನಲ್ಲಿ ಸುಮಾರು 300 ಕ್ಕೂ ಅಧಿಕ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಫೀಲ್ಡ್‍ನಲ್ಲಿದ್ದು, ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಸತತ ಹೋರಾಟ ನಡೆಸುತ್ತಿದ್ದಾರೆ. ಪರ ಊರಿನಲ್ಲಿದ್ದು ಎರಡು ತಾಲೂಕಿಗೆ ಬಂದಿರುವ ನೂರಾರು ಮಂದಿಯನ್ನು ಗುರುತಿಸಿ ಅವರನ್ನು ಹೋಮ್ ಕ್ವಾರಂಟೈನ್‍ನಲ್ಲಿರಿಸಿ ಸಹಜ ಜೀವನಕ್ಕೆ ಬರುವ ನಿಟ್ಟಿನಲ್ಲಿ ಕಣ್ಣಿಟ್ಟು ಕಾದಿದ್ದಾರೆ.
ಮಾ.24ರಿಂದ ಈವರೆಗೆ ನಿರಂತರವಾಗಿ ಕೊರೊನಾ ವಿರುದ್ಧ ಜಾಗೃತಿ ಹೋರಾಟದಲ್ಲಿ ಆಶಾ ಕಾರ್ಯಕರ್ತರೊಂದಿಗೆ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಈಗ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ. ತಾಲೂಕಿನ ವಿವಿಧೆಡೆ ದಿಗ್ಬಂಧನ, ಬೆದರಿಕೆ, ದೌರ್ಜನ್ಯದಂತಹ ಘಟನೆಗಳು ನಡೆದಿದ್ದರು ಸಹ ಜಗ್ಗದೆ ಮುನ್ನುಗ್ಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಎದ್ದು ಕಾಣುತ್ತಿದೆ. ರಜೆ ರಹಿತ ದುಡಿಮೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ರಿಯಲ್ ವಾರಿಯರ್ಸ್.
ಆರೋಗ್ಯ ವಿಮೆ ಇಲ್ಲ:
ಕೊರೊನಾ ಸೋಂಕಿನ ವಿರುದ್ಧ ಸೆಣಸುತ್ತಿರುವ ಆಶಾ ಕಾರ್ಯಕರ್ತರಿಗೆ ಸರಕಾರ ಆರೋಗ್ಯ ವಿಮೆ ಜಾರಿಗೊಳಿಸಿದೆ. ಆದರೆ ಅಂಗನವಾಡಿ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದೆ. ಕೊರೊನಾ ತಡೆ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಯಕರ್ತೆಯರು ಸೋಂಕಿತರಾದರೆ ಅಥವಾ ಅಹಿತಕರ ಘಟನೆಯಿಂದ ದುರಂತವಾದರೆ ಯಾವುದೇ ರಕ್ಷಣೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ವಿಮಾ ಸೌಲಭ್ಯ ಜಾರಿಗೊಳಿಸಬೇಕು ಮತ್ತು ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಅಂಗನವಾಡಿ ಕಾರ್ಯಕರ್ತೆಯರಿಂದ ಕೇಳಿ ಬಂದಿದೆ.
ಕೊರೊನಾ ಸೋಂಕಿನ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಹಾಗೂ ಅವರ ಪರಿಶ್ರಮವನ್ನು ಗುರುತಿಸದಿರುವುದು ಅಂಗನವಾಡಿ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ಕೊರೊನಾ ವೈರಸ್ ಹರಡದಂತೆ ಪ್ರತಿಯೊಂದು ಗ್ರಾಮದ ಮೂಲೆ ಮೂಲೆಗೆ, ಮನೆ ಮನೆಗೆ ಭೇಟಿ ನೀಡಿ ಕೊರೊನಾ ವಿರುದ್ಧ ಗ್ರಾಮದ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಾಗಲೀ ಅಥವಾ ಜನಪ್ರತಿನಿಧಿಗಳಾಗಲಿ ಗುರುತಿಸುತ್ತಿಲ್ಲ ಎಂಬ ಕೊರಗು ಅಂಗನವಾಡಿ ಕಾರ್ಯಕರ್ತೆಯರನ್ನು ಕಾಡುತ್ತಿದೆ.
ನಿಕೃಷ್ಟವಾಗಿ ಕಾಣದಿರಿ:
ಪ್ರತಿದಿನ ನಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ. ಮಾಹಿತಿ ಕಲೆ ಹಾಕಿ ವರದಿ ನೀಡುತ್ತಿದ್ದೇವೆ. ಬಹುತೇಕ ಮಂದಿ ನಮಗೆ ಸಮರ್ಪಕ ಮಾಹಿತಿ ನೀಡುತ್ತಿದ್ದಾರೆ. ಕೆಲವರು ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಬಿರುಬಿಸಿಲು ಲೆಕ್ಕಿಸಿದೆ ದಿನವಿಡಿ ಸಮುದಾಯದ ಒಳಿತಿಗಾಗಿ ದುಡಿಯುತ್ತಿರುವ ನಮ್ಮನ್ನು ಯಾರು ನಿಕೃಷ್ಟವಾಗಿ ಕಾಣಬೇಡಿ– ರೇಖಾ ಖಾರ್ವಿ, ಅಂಗನವಾಡಿ ಕಾರ್ಯಕರ್ತೆ, ಗಂಗೊಳ್ಳಿ.
ಕೊರೊನಾ ತಡೆಯೋಣ:
ಆರೋಗ್ಯ ಇಲಾಖೆ, ಸರಕಾರದ ನಿರ್ದೇಶನವನ್ನು ಪ್ರತಿಯೊಬ್ಬ ನಾಗರಿಕರು ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವೈಯಕ್ತಿಕ ಸ್ವಚ್ಚತೆ ಅತಿ ಅಗತ್ಯ. ಪ್ರತಿ ಮನೆಗೂ ತೆರಳಿ ಜನರಿಗೆ ಇದರ ಅರಿವು ಮೂಡಿಸುತ್ತಿದ್ದೇವೆ. ಕಳೆದ ಒಂದು ತಿಂಗಳಿನಿಂದ ಈ ಮಹತ್ಕಾರ್ಯದಲ್ಲಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಹೆಗಲು ನೀಡಿ ಇದು ನಮ್ಮ ಕರ್ತವ್ಯ ಎಂದು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸುವ ಕಾರ್ಯ ನಡೆಸಬೇಕು. ತನ್ಮೂಲಕ ಅವರಲ್ಲಿ ಸ್ಫೂರ್ತಿ ತುಂಬಬೇಕು.– ಫಿಲೋಮಿನಾ ಫೆರ್ನಾಂಡಿಸ್, ಅಂಗನವಾಡಿ ಕಾರ್ಯಕರ್ತೆ, ಗಂಗೊಳ್ಳಿ.