ಕುಂದಾಪುರ: ಕಾಡಂಚಿನ ಪ್ರದೇಶಗಳಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವ ಮಂಗಗಳ ಸರಣಿ ಸಾವಿನ ಬೆನ್ನಲ್ಲೇ ಇದೀಗ ತಾಲೂಕಿನ ಕಂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಶಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಇನ್ನೊಂದು ಮಂಗನ ಕಳೆಬರ ಪತ್ತೆಯಾಗಿದೆ.
ಸ್ಥಳೀಯ ನಿವಾಸಿ ಫ್ರಾಂಕ್ಲಿನ್ಡೇಸಾ ಎನ್ನುವವರ ಕಾಡಿನಲ್ಲಿ ಮಂಗನ ಕಳೆಬರವನ್ನು ನೋಡಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸುದ್ದಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಅಗತ್ಯ ಕ್ರಮಕ್ಕಾಗಿ ಮನವಿ ಮಾಡಲಾಗಿದ್ದು, ಸ್ಥಳಕ್ಕೆ ಬಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲತಾ ನಾಯ್ಕ್ ಹಾಗೂ ನೇರಳಕಟ್ಟೆಯ ಅರಣ್ಯಾಧಿಕಾರಿಗಳ ಸಮಕ್ಷಮದಲ್ಲಿ ಕೊಳೆತ ಕಳೆಬರವನ್ನು ಸುಟ್ಟು ಹಾಕಿ ೫೦ ಮೀಟರ್ವ್ಯಾಪ್ತಿಯಲ್ಲಿ ಮೇಲೋತೈಯನ್ಪುಡಿಯನ್ನು ಸಿಂಪಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಮರಾಶೆಯಲ್ಲಿ ಕಂಡು ಬಂದಿರುವ ಮಂಗನ ಕಳೆಬರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ವಿಧಿ ವಿಜ್ಞಾನ ಪರೀಕ್ಷೆಗಾಗಿ ಅಂಗಾಂಗಳನ್ನು ರಕ್ಷಿಸಿಡಲು ಸಾಧ್ಯವಾಗದೆ ಇರುವುದರಿಂದ ಮರಣೋತ್ತರ ಶವ ಪರೀಕ್ಷೆ ನಡೆಸದೆ ಕಳೆಬರ ವಿಲೆವಾರಿ ಮಾಡಲಾಗಿದೆ. ಕಂಡ್ಲೂರು ಪರಿಸರದಲ್ಲಿ ಇನ್ನೊಂದು ಮಂಗನ ಶವ ಪತ್ತೆಯಾಗಿರುವ ಮಾಹಿತಿ ಇದ್ದು, ಶನಿವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಾ. ನಾಗಭೂಷಣ್ ಉಡುಪಿ ತಿಳಿಸಿದ್ದಾರೆ.