ಉಡುಪಿ: ಜಿಲ್ಲೆಯ ಮೂರನೇ ಕೊರೊನಾ ಸೋಂಕಿತ (ಕೋವಿಡ್-19) ಉಡುಪಿಯ 29 ವರ್ಷದ ಯುವಕ ಸಂಪೂರ್ಣ ಗುಣಮುಖನಾಗಿದ್ದು, ಆತನನ್ನು ಇಂದು ಮಧ್ಯಾಹ್ನದ 2.55 ವೇಳೆಗೆ ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಹೇಳಿದ್ದಾರೆ.
ಈತನ ಗಂಟಲಿನ ದ್ರವದ ಮಾದರಿಯನ್ನು ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಎರಡು ಮಾದರಿಗಳಲ್ಲಿ ನೆಗೆಟಿವ್ ವರದಿ ಬಂದಿದ್ದು, ಇದೀಗ ಆತ ಸೋಂಕಿನಿಂದ ಸಂಪೂರ್ಣ ಚೇತರಿಸಿ ಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಆತನನ್ನು
ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈತ ಬಿಡುಗಡೆ ಆದರೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈತ ಮಾರ್ಚ್ 24ರಂದು ಕೇರಳದಿಂದ ಉಡುಪಿಗೆ ಬಂದಿದ್ದು, ಬಳಿಕ ಈತನಲ್ಲಿ ಕೊರೊನಾದ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಆ ವರದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಮೂರು ಸೋಂಕಿತರು ಗುಣಮುಖ: ಈ ಮೂರನೇ ರೋಗಿಯೂ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದರೊಂದಿಗೆ ಜಿಲ್ಲೆಯ ಮೂವರು ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾದಂತಾಗಿದೆ. ಸದ್ಯ ಉಡುಪಿ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಅಲ್ಲದೆ, ಉಡುಪಿ ಆರೆಂಜ್ ಝೂನ್ ನಿಂದ ಸೇಫ್ (ಗ್ರೀನ್ ಝೂನ್)ಗೆ ಎಲ್ಲ ಸಾಧ್ಯತೆ ಇದೆ.
ಜಿಲ್ಲೆಯ ಗಡಿಗಳು ಸಂಪೂರ್ಣ ಬಂದ್: ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಸೋಂಕಿತರಿಲ್ಲದಿದ್ದರು ಲಾಕ್ ಡೌನ್ ಮುಂದುವರಿಯಲಿದೆ.