ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 7 ಮಂದಿ ಕೊರೊನಾ ಶಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಕೇಂದ್ರಗಳ ಕೊರತೆ ಇದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಕೊರೊನಾ ಶಂಕಿತರ ಸ್ಯಾಂಪಲ್ ಅನ್ನು ಪರೀಕ್ಷೆಗೆ ಒಳಪಡಿಸುವ ವಿಧಾನವನ್ನು ಬದಲಾವಣೆ ಮಾಡಿದೆ. ಪ್ರಯೋಗಾಲಯದ ವೈದ್ಯರ ಸೂಚನೆಯಂತೆ ಆಸ್ಪತ್ರೆಗಳು ಶಂಕಿತರ ಸ್ಯಾಂಪಲ್ ಕಳುಹಿಸುವಂತೆ ಆದೇಶ ಹೊರಡಿಸಿದೆ. ಅದರಂತೆ ಇಂದು ಜಿಲ್ಲೆಯಲ್ಲಿ ಕಂಡುಬಂದ ಏಳು ಮಂದಿ ಶಂಕಿತರ ಪೈಕಿ ಎರಡು ಮಂದಿಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು ಐದು ಮಂದಿಯ ವರದಿ ಕಳುಹಿಸಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 126 ಮಂದಿ ಕೊರೊನಾ ಶಂಕಿತರನ್ನು ಪತ್ತೆ ಮಾಡಲಾಗಿದ್ದು, ಅದರಲ್ಲಿ 103 ಮಂದಿಯ ವೈದ್ಯಕೀಯ ವರದಿ ಬಂದಿದೆ. ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಹಾಗೂ ಉಳಿದೆಲ್ಲವೂ ನೆಗೆಟಿವ್ ಫಲಿತಾಂಶ ಬಂದಿದೆ. ಇನ್ನು 126 ಶಂಕಿತರ ಪೈಕಿ 23 ಮಂದಿಯ ವೈದ್ಯಕೀಯ ವರದಿ ಬರಲು ಬಾಕಿ ಇದೆ ಎಂದು ಡಿಎಚ್ ಒ ತಿಳಿಸಿದ್ದಾರೆ.