“ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ಆಹಾರ ನೀಡುವುದು ಉತ್ತಮ”

ಉಡುಪಿ: ಸರಕಾರದ ನಿಷೇಧಾಜ್ಞೆಯಿಂದ ಅಂಗಡಿ ಹೋಟೆಲುಗಳು ಮುಚ್ಚಿವೆ. ಅವುಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ ಬೀದಿ ನಾಯಿಗಳ ಪಾಡೂ ಹೇಳದಂತಾಗಿದೆ. ಒಂದಡೆ ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿರುವ ಶ್ವಾನ ಪ್ರಿಯರು ನಿಷೇಧಾಜ್ಞೆ ಕಾರಣದಿಂದ ರಸ್ತೆಗೆ ಸುಳಿದಾಡುವಂತಿಲ್ಲ.ಆದರೂ ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ನೀಡುವುದು ಉತ್ತಮ ಎಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಉಡುಪಿ ನಗರದಲ್ಲಿ ನೂರಾರು ಬೀದಿ ನಾಯಿಗಳಿವೆ. ಅವುಗಳು ಹಸಿವೆಯಿಂದ ಬಳಲುತ್ತಿರುವುದನ್ನು ಕಂಡು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅವುಗಳಿಗೆ ನಿತ್ಯವು ಆಹಾರ ಒದಗಿಸುತ್ತಿದೆ. ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಪ್ರಥ್ವಿ ಪೈ ಅವರು ಬೀದಿ ಶ್ವಾನಗಳ ಉದರ ಹಸಿವು ತಣಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರತಿ ಜೀವಿಗಳಿಗೂ ಬದುಕುವ ಹಕ್ಕಿದೆ. ನಗರದಲ್ಲಿ ಜನ ಸಂಚಾರ ಇಲ್ಲದೆ ಬೀದಿ ನಾಯಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇವುಗಳು ಹಸಿವೆಯಿಂದ ಕಂಗೆಟ್ಟು ಮನಷ್ಯನನ್ನೇ ಕಚ್ಚಿ ತಿನ್ನುವ ಪರಿಸ್ಥಿತಿ ಬರಬಹುದು. ಪೊಲೀಸರು ಗಸ್ತು ಕಾರ್ಯಚರಣೆಯಲ್ಲಿ ಇರುವಾಗಲೂ ಅವರ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯೂ ಇದೆ. ಹಾಗಾಗಿ ಸಾರ್ವಜನಿಕರು ಕರ್ಪ್ಯೂ ಸಡಿಲಿಕೆಗೊಂಡ ಸಮಯದಲ್ಲಾದರೂ ನಾಯಿಗಳಿಗೆ ನೀಡುವುದು ಉತ್ತಮವೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಹೇಳಿದ್ದಾರೆ.