-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ಮರಳಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂದ ಹೇರಲಾದ ಪರಿಣಾಮ ಶನಿವಾರ ನಸುಕಿನ ಜಾವ ಜಿಲ್ಲೆಯ ಗಡಿಭಾಗವಾದ ಶಿರೂರು ಚೆಕ್‍ಪೋಸ್ಟ್ ಬಳಿ ವಲಸೆ ಕಾರ್ಮಿಕರು ಅತಂತ್ರಕ್ಕೆ ಸಿಲುಕಿದ ಘಟನೆ ನಡೆದಿದೆ.
ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಹೊರಡಿಸಿರುವ ಲಾಕ್‍ಡೌನ್ ಆದೇಶ ಜಾರಿಗೊಂಡ ದಿನದಿಂದಲೂ ವಲಸೆ ಕಾರ್ಮಿಕರು ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಶಿರೂರು ಚೆಕ್‍ಪೋಸ್ಡ್ ಬಳಿಯಲ್ಲಿ ನಸುಕಿನ ಜಾವ ಎರಡು ಗಂಟೆಯ ಬಳಿಕ ಜಮಾವಣೆಗೊಂಡ ಬಿಜಾಪುರ, ಕೊಪ್ಪಳ, ಬಾಗಲಕೋಟೆ, ಗುಲ್ಬರ್ಗಾದ ಕಾರ್ಮಿಕರನ್ನು ಮುಂದಕ್ಕೆ ಸಾಗಿಸುವ ಪ್ರಯತ್ನವನ್ನು ಜಿಲ್ಲಾಡಳಿತ ನಡೆಸಿದರೂ ಅದು ಫಲ ಕಾಣಲಿಲ್ಲ. ವಲಸೆ ಕಾರ್ಮಿಕರ ನೆರವಿಗೆ ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ, ಎಎಸ್ಪಿ ಹರಿರಾಮ್ ಶಂಕರ್ ಹಾಗೂ ಬೈಂದೂರು ಪಿಎಸ್‍ಐ ಸಂಗೀತಾ ಉತ್ತರಕನ್ನಡ ಜಿಲ್ಲಾಡಳಿತದ ಮನವೊಲಿಸಲು ಪ್ರಯತ್ನ ನಡೆಸಿದರು. ಅಲ್ಲದೇ ಸಾವಿರಾರು ನೀರಿನ ಬಾಟಲಿಗಳನ್ನು ತರಿಸಿ ಸ್ವತ: ನೀರನ್ನು ವಿತರಿಸಿದರು. ಸ್ಥಳೀಯರ ಸಹಕಾರದಿಂದ ಠಾಣಾಧಿಕಾರಿ ಸಂಗೀತಾ ಬೆಳಿಗ್ಗೆ ಮೂರು ಗಂಟೆಗೆ ದಿನಸಿ ಅಂಗಡಿಗಳನ್ನು ತೆರೆಸಿ ದಾನಿಗಳ ನೆರವಿನಿಂದ ಸುಮಾರು ಸಾವಿರದ ಇನ್ನೂರು ಜನರಿಗೆ ಉಪಹಾರದ ವ್ಯವಸ್ಥೆ ಮಾಡಿಸಿದ್ದಾರೆ. ಯಾರಿಗೂ ಕೂಡ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಅಲ್ಲದೇ ಎಮ್‍ಎಮ್ ಹೌಸ್ ಶಿರೂರು ಹಾಗೂ ಅರುಣ್ ಪಬ್ಲಿಸಿಟಿ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರದ ಬಳಿಕ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಲ್ಲಾ ವಲಸೆ ಕಾರ್ಮಿಕರನ್ನು ಸಂತೈಸಿ ಅವರನ್ನು ಮರಳಿ ಉಡುಪಿಗೆ ಕಳುಹಿಸಲಾಯಿತು.
ಟೋಲ್‍ಗೇಟ್‍ನಲ್ಲಿ ಮುಂದುವರಿದ ತಪಾಸಣೆ:
ಶಿರೂರು, ಕೊಲ್ಲುರು ಸೇರಿದಂತೆ ಜಿಲ್ಲೆಯ ಎಲ್ಲಾ ಗಡಿಭಾಗಗಳಲ್ಲಿಯೂ ಅಂತರ್ ಜಿಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂದ ಹೇರಲಾಗಿದ್ದು, ಚೆಕ್‍ಪೋಸ್ಟ್‍ಗಳನ್ನು ಹಾಕಲಾಗಿದೆ. ಶಿರೂರು ಟೋಲ್‍ಗೇಟ್ ಬಳಿ ತಪಾಸಣೆ ಎಂದಿನಂತೆ ಮುಂದುವರೆದಿದೆ. ಆಹಾರ ಸಾಮಾಗ್ರಿ, ಆಂಬುಲೆನ್ಸ್, ಕೆಲವು ಅಗತ್ಯ ವಾಹನಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ವಾಹನ ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ.
ಮೂರು ದಿನದಿಂದ ಏನು ತಿಂದಿಲ್ಲ ಸರ್: ಕಾರ್ಮಿಕರ ಕಣ್ಣೀರು
ಉತ್ತರಕನ್ನಡ ಜಿಲ್ಲೆಗೆ ಪ್ರವೇಶ ಅವಕಾಶ ನಿರಾಕರಿಸಿದ ಬಳಿಕ ಕಾರ್ಮಿಕರೆಲ್ಲರೂ ರಸ್ತೆಯಲ್ಲಯೇ ಮಲಗಿ ವಿಶ್ರಾಂತಿ ಪಡೆದರು. ಪೋಲೀಸರು ಹಾಗೂ ಅಧಿಕಾರಿಗಳು ಸಾವಧಾನದಿಂದ ಪ್ರತಿಯೊಬ್ಬರನ್ನು ಸಂತೈಸಿ ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ ವೈದ್ಯಕೀಯ ತಪಾಸಣೆ ನಡೆಸಿದರು. “ಸಾಮಿ.. ನಮ್ ಮಾಲಿಕ್ರು ನಮ್ಮನ್ನ ಉಳಿಸ್ಕೊಳ್ಳಾಕ ತಯಾರಿಲ್ಲ. ನಮ್ ಕೈಯಾಗ್ ರೊಕ್ಕನೂ ಖಾಲಿ ಆಗೈತಿ. ಮೂರ್ ದಿನದಿಂದ ಸರಿಯಾಗಿ ಊಟಾನೂ ಮಾಡಿಲ್ಲ. ಊಟ ಇಲ್ಲಿದ್ರು ತೊಂದ್ರಿ ಇಲ್ಲಾ. ನಮ್ಗ್ ಊರಿಗೆ ಹೊಗಾಕ್ ಬಿಟ್ರ್ ಸಾಕ್” ಎಂದ ವೃದ್ದ ಮಹಿಳೆಯ ಮಾತಿಗೆ ಅಧಿಕಾರಿಗಳು ಅಸಹಾಯಕತೆಯಿಂದ ಸಂತೈಸಿದ ದೃಶ್ಯ ಕಂಡುಬಂದಿತು.