-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ರಾಜ್ಯದೆಲ್ಲಡೆ ಕೊರೋರಾ ಮಹಾಮಾರಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊರಡಿಸಿರುವ ಕಫ್ರ್ಯೂ ಆದೇಶಕ್ಕೆ ನಗರದ ಸಾರ್ವಜನಿಕರು ಕ್ಯಾರೇ ಅನ್ನುತ್ತಿಲ್ಲ.
ಸಾರ್ವಜನಿಕರಿಗೆ ತೊಂದರೆಯಾಗಬಾರೆದೆಂಬ ಉದ್ದೇಶದಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಕಫ್ರ್ಯೂ ಸಡಿಲಗೊಳಿಸಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದನ್ನು ದುರುಪಯೋಗಪಡಿಸಿಕೊಂಡು ಅನಗತ್ಯವಾಗಿ ಕೆಲ ರಸ್ತೆ ಮೇಲೆ ತಿರುಗಾಡುತ್ತಿರುವ ವಾಹನ ಸವಾರರಿಗೆ ಬುಧವಾರದಿಂದಲೇ ಪೊಲೀಸರು ಲಾಠಿ ಚಾರ್ಜ್ ಮಾಡಲಾರಂಭಿಸಿದ್ದಾರೆ. ಬುಧವಾರ ಬೆಳಿಗ್ಗೆ ಲಾಠಿ ಚಾರ್ಜ್ ಮಾಡಿದ್ದರಿಂದ ಕೆಲಹೊತ್ತು ಕುಂದಾಪುರ ನಗರದ ರಸ್ತೆಗಳು ಖಾಲಿಯಾಗದ್ದವು.
ಸುಮ್ಮನೆ ರಸ್ತೆಗಿಳಿದರೆ ಬಸ್ಕಿ ಅಸ್ತ್ರ:
ಲಾಠಿ ಚಾರ್ಜ್ ನಡೆಸಿದರೂ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿರುವ ಸಾರ್ವಜನಿಕರಿಗೆ ಪೊಲೀಸರು ಬಸ್ಕಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಅನಗತ್ಯವಾಗಿ ರಸ್ತೆ ಮೇಲೆ ಬಂದರೆ ಪೊಲೀಸರು ಬುದ್ದಿ ಮಾತು ಹೇಳಿ ಹತ್ತು ಬಸ್ಕಿ ಹೊಡೆದು ವಾಪಾಸು ಕಳುಹಿಸುತ್ತಿದ್ದಾರೆ. ಇನ್ನು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮಾಸ್ಕ್ ಧರಿಸದೆ ನಗರಕ್ಕೆ ಬರುತ್ತಿರುವ ಜನರಿಗೂ ಪೊಲೀಸರು ಬಸ್ಕಿ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.
ಅಂಗಡಿ, ಮುಂಗಟ್ಟು ಸ್ತಬ್ಧ:
ಕಫ್ರ್ಯೂ ಆದೇಶ ಹೊರಡಿಸಿದ ಮೊದಲ ದಿನದಿಂದಲೂ ಕುಂದಾಪುರ ತಾಲೂಕಿನ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲೇ ಉಳಿದುಕೊಂಡಿದ್ದರಿಂದ ಇದೀಗ ತಾಲೂಕಿನ ಎಲ್ಲಾ ವ್ಯಾಪಾರ-ವ್ಯವಹಾರಗಳು ಸಂಪೂರ್ಣ ಸ್ತಬ್ಧವಾಗಿದೆ.
ಎರಡು ಕಡೆಗಳಲ್ಲಿ ಪೊಲೀಸ್ ನಾಕಾಬಂಧಿ:
ಕೋಟೇಶ್ವರ ಭಾಗದಿಂದ ಕುಂದಾಪುರ ನಗರ ಪ್ರವೇಶಿಸುವ ಶಾಸ್ತ್ರೀ ವೃತ್ತದಲ್ಲಿ ಹಾಗೂ ಹೆಮ್ಮಾಡಿ, ತಲ್ಲೂರು ಭಾಗಗಳಿದ ಕುಂದಾಪುರ ನಗರ ಪ್ರವೇಶಿಸುವ ಸಂಗಮ್ ಜಂಕ್ಷನ್‍ನ ಚಿಕನ್‍ಸಾಲ್ ರಸ್ತೆಯ ಆರಂಭದಲ್ಲಿ ನಾಕಾಬಂಧಿ ಹಾಕಲಾಗಿದೆ. ಎರಡೂ ಕಡೆಗಳಲ್ಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಅತಗ್ಯ ವಸ್ತುಗಳಿಗಾಗಿ ಬರುವ ಸವಾರರಿಗೆ ಮಾತ್ರ ನಗರ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅನಗತ್ಯವಾಗಿ ಬಂದವರಿಗೆ ಲಾಠಿ ರುಚಿ ತೋರಸಿ ಪೊಲೀಸರು ಮನೆ ಕಳುಹಿಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಎಲ್ಲವೂ ಸ್ತಬ್ಧ:
ನಗರ ಭಾಗಗಳ ಜನರಿಗಿಂತ ಗ್ರಾಮೀಣ ಭಾಗದ ಜನರಿಗೆ ಕೊರೋನಾ ಬಿಸಿ ತಟ್ಟಿದ್ದು, ಸರ್ಕಾರ ಹೊರಡಿಸಿರುವ ಕಫ್ರ್ಯೂ ಆದೇಶವನ್ನು ಅರಿಯಾಗಿ ಪಾಲಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರೆಲ್ಲರೂ ಅಗತ್ಯ ಬೇಕಾಗುವ ಸಾಮಾಗ್ರಿಗಳನ್ನು ಒಬ್ಬೊಬ್ಬರಾಗಿಯೇ ದಿನಕ್ಕೆ ಒಂದೇ ಸಲ ಬಂದು ಖರೀದಿ ಮಾಡಿ ಹೋಗುತ್ತಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ:
ಮೂರು ದಿನಗಳಿಂದಲೂ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸದ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದರು. ಈ ಬಗ್ಗೆ ಪತ್ರಕರ್ತರು ಎಸಿ ಹಾಗೂ ಎಎಸ್ಪಿಯವರ ಗಮನಕ್ಕೆ ತಂದಿದ್ದು, ಇದೀಗ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗಧಿಪಡಿಸಲಾಗಿದೆ. ದಿನಸಿ, ತರಕಾರಿ ಅಂಗಡಿಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತೆರೆಯಲು ಅವಕಾಶ ನೀಡಲಾಗಿದೆ. ಉಳಿದಂತೆ ಮೆಡಿಕಲ್ ಹಾಗೂ ಆಸ್ಪತ್ರೆಗಳು ಸಂಜೆಯ ನಂತರವೂ ತೆರಯಲಿವೆ. ಹಾಲು ಅಂಗಡಿಗಳು ಬೆಳಗ್ಗಿನಿಂದಲೇ ತೆರೆಯಲಿದ್ದು, ಪ್ರತೀ ಮನೆಯ ಒಬ್ಬೊಬ್ಬ ಸದಸ್ಯರು ಮಾತ್ರ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಅಲ್ಪಸ್ವಲ್ಪ ಸಾಮಾನುಗಳನ್ನು ಖರೀದಿಸಲು ಪದೇ ಪದೇ ಬರಬಾರದು ಎಂದು ಸಹಾಕಯ ಕಮಿಷನರ್ ರಾಜು ಕೆ ಹಾಗೂ ಎಎಸ್‍ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಹಸಿದವರ ದಣಿವಾರಿಸುವ ಪಾರಿಜಾತ:
ಕಫ್ರ್ಯೂ ಆದೇಶದ ಹಿನ್ನೆಲೆ ನಗರದ ಎಲ್ಲಾ ಹೊಟೇಲ್‍ಗಳು ಬಂದ್ ಆಗಿರುವ ಕಾರಣ ವಲಸೆ ಕಾರ್ಮಿಕರು ಹಾಗೂ ಹೊತ್ತಿನ ಊಟಕ್ಕಾಗಿ ಪರದಾಡುವ ಮಂದಿಗೆ ನಗರದ ಪ್ರತಿಷ್ಠಿತ ಹೋಟೇಲ್‍ಗಳಲ್ಲಿ ಒಂದಾದ ಪಾರಿಜಾತ ಹೊಟೇಲ್ ಮಾಲೀಕರು ಪ್ರತೀ ದಿನ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹೊಟೇಲ್ ಸಿಬ್ಬಂದಿಗಳು ಹಾಗೂ ಜೆಸಿಐ ಕುಂದಾಪುರ ಸಿಟಿಯ ಕಾರ್ಯಕರ್ತರು ಸ್ವಯಂಸೇವಕರಾಗಿ ಊಟ-ಉಪಹಾರಗಳನ್ನು ಹಂಚುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ಬಂದೋಬಸ್ತ್‍ನಲ್ಲಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರವಲ್ಲದೇ ಪತ್ರಕರ್ತರಿಗೂ ಸಮಯಕ್ಕೆ ಸರಿಯಾಗಿ ಊಟೋಪಚಾರ ವ್ಯವಸ್ಥೆ, ಬಿಸ್ಕೆಟ್, ನೀರು, ಹಣ್ಣುಗಳನ್ನು ನೀಡಿ ದಣಿವಾರಿಸುತ್ತಿದ್ದರೆ. ಪಾರಿಜಾತ ಹೊಟೇಲ್‍ನ ಈ ಮಾನವೀಯ ಕಳಕಳಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಗುರುವಾರ ಬೈಂದೂರಿನ ಜನತಾ ರತ್ತು ಬಾೈ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಜಿ.ಎಸ್ ಭಟ್ ಅವರ ನೇತೃತ್ವದಲ್ಲಿಯೂ ಊಟಗಳನ್ನು ವಿತರಿಸಲಾಗಿದೆ.
ರಾಜು ಕೆ, ಸಹಾಯಕ ಕಮಿಷನರ್ ಕುಂದಾಪುರ
ಜನರಿಗೆ ತೊಂದರೆಗಳಾಗಬಾರದೆಂಬ ದಿಸೆಯಲ್ಲಿ ಕಫ್ರ್ಯೂವನ್ನು ಸಡಿಲಗೊಳಿಸಿದ್ದೇವೆ. ಆದರೆ ಕೆಲವರು ಸುಖಾಸುಮ್ಮನೆ ರಸ್ತೆಗೆ ಬರುತ್ತಿರುವುದು ಪೊಲೀಸ್ ವಿಚಾರಣೆಯ ವೇಳೆ ಬಯಲಾಗಿದೆ. ಗುರುವಾರ ಹೆಚ್ಚಿನ ಜನರು ಅನಗತ್ಯವಾಗಿ ನಗರದಲ್ಲಿ ಸಂಚಾರ ನಡೆಸುತ್ತಿರುವುದು ಸ್ವತಃ ನಾನೇ ತಪಾಸಣೆ ನಡೆಯುತ್ತಿರುವ ವೇಳೆಯಲ್ಲಿ ತಿಳಿದುಬಂದಿದೆ. ನಾವಿರುವುದೇ ಜನರ ಆರೋಗ್ಯ ಕಾಪಾಡಲು. ಜನರ ಮೇಲಿನ ಕಾಳಜಿಗೆ ಸರ್ಕಾರ ಕಫ್ರ್ಯೂ ವಿಧಿಸಿದೆ. ಜನರು ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಬೇಕು.