ಉಡುಪಿ : ಕೊರೊನಾ ನಿಯಂತ್ರಣ ಕುರಿತಂತೆ, ರಾಜ್ಯ ಸರ್ಕಾರ ಸೂಚಿಸಿರುವ ನಿರ್ಬಂಧಗಳನ್ನು ಉಡುಪಿ ಜಿಲ್ಲೆಯ ನಾಗರೀಕರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಈ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಅವರು ಮಂಗಳವಾರ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಗೆ ವಿದೇಶದಿಂದ ಬಂದಿರುವ 900 ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರ ಮನೆಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ 2 ಬಾರಿ ಗಸ್ತು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಲಿದ್ದಾರೆ ಅಲ್ಲದೇ ಈ ಮನೆಗಳ ಪಕ್ಕದವರಿಗೂ ಇವರ ಬಗ್ಗೆ ಮಾಹಿತಿ ನೀಡಿದ್ದು, ಮನೆಯಿಂದ ಹೊರಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಉಚಿತ ಟೋಲ್ ಫ್ರೀ ನಂ.1077 ಹಾಗೂ ಪೊಲೀಸ್ ಕಂಟ್ರೋಲ್ ರೂ.100 ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ, ಈ ನಿರ್ಬಂದ ಪಾಲಿಸದಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ದಿನನಿತ್ಯದ ದಿನಸಿ ವಸ್ತುಗಳು ದೊರೆಯಲಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವುದನ್ನು ನಿರ್ಬಂದಿಸಿದೆ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಮನೆಯಿಂದ ಹೊರಬರಲು ಅವಕಾಶವಿದೆ, ತರತಕಾರಿ , ಹಣ್ಣು ಮುಂತಾದ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ಬೆಲೆಗೆ ಮಾರುವವರ ವಿರುದ್ದ ಸಹ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದ ಎಚ್ಚರಿಸಿದ ಜಿಲ್ಲಾಧಿಕಾರಿ, ಜಿಲ್ಲಗೆ ಹೊರ ಜಿಲ್ಲೆಯಿಂದ ಬರುವ ದಿನಸಿ ಮತ್ತು ತರಕಾರಿ ವಾಹನಗಳ ಚಾಲಕರ ಆರೋಗ್ಯವನ್ನು ಪರಿಶೀಲಿಸಿ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುವುದು , ವ್ಯಾಪಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಗ್ರಾಹಕರಿಂದ 6 ಅಡಿ ಅಂತರದಲ್ಲಿ ವ್ಯವಹಾರ ನಿರ್ವಹಿಸುವಂತೆ ಹಾಗೂ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ಇದ್ದು, ಗ್ರಾಹಕರು ಕುಳಿತು ತಿನ್ನುವುದಕ್ಕೆ ಅವಕಾಶವಿಲ್ಲ ಇದನ್ನು ಉಲ್ಲಂಘಿಸಿದಲ್ಲಿ ಗೃಆಹಕರು ಮತ್ತು ಸಂಬಂದಪಟ್ಟ ಹೊಟೆಲ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ, ಒಂದು ವೇಳ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ , ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಅದರ ಹೊರತು ಬೇರೆ ಯಾವುದೇ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡುವುದಿಲ್ಲ, ಕರೋನಾ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಕೊರೋನಾ ಶಂಕಿತರನ್ನು ಐಸೋಲೇಶನ್ ನಲ್ಲಿಡಲು ಉದ್ಯಾವರದ ಎಸ್.ಡಿ.ಎಂ ಕಾಲೇಜಿನಲ್ಲಿ 150 ಬೆಡ್ ಗಳ ವ್ಯವಸ್ಥೆ ಮಾಡಿದ್ದು, ಇನ್ನೂ ಅಗತ್ಯ ಬಿದ್ದಲ್ಲಿ ಕೆಎಂಸಿ ಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮತ್ತು ನಗರದ ನೂತನ ಗ್ರಂಥಾಲಯ ಕಟ್ಟಡದಲ್ಲಿ ಸಹ ಅಗತ್ಯ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಈಗಾಗಲೇ ಕೆಲವೊಂದು ಅಂಗಡಿಗಳು, ವಾಣಿಜ್ಯ ಸಂಸ್ಥೆ, ಕೈಗಾರಿಕೆಗಳ ವ್ಯವಹಾರವನ್ನು ಸ್ಥಗಿತಗೊಳಿಸಿದ್ದು, ಅಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನಸಹಿತ ರಜೆ ನೀಡುವಂತೆ ಮತ್ತು ಅವರನ್ನು ಉದ್ಯೋಗದಿಂದ ವಜಾಗೊಳಿಸಂತೆ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಕ್ ಗಳ ತಮ್ಮ ಸೇವೆಯನ್ನು ಸ್ಥಗಿತಗೊಳಿಸದಂತೆ ತಿಳಿಸಿದ ಜಿಲ್ಲಾಧಿಕಾರಿಗಳು , ಅವಶ್ಯಕ ಸೇವೆ ಹೊರತುಪಡಿಸಿ ಇತರೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಕಚೇರಿಗೆ ಬರುವ ಅಗತ್ಯವಿಲ್ಲ ಆದರೆ ಕೇಂದ್ರಸ್ಥಾನದಲ್ಲಿ ಲಭ್ಯರಿದ್ದು ತುರ್ತು ಸಂದರ್ಭದಲ್ಲಿ ಹಾಜರಾಗುವಂತೆ ಸೂಚಿಸಿದರು.
ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಹೋಗಿರುವ ಬೋಟುಗಳು ಮಾತ್ರ ವಾಪಸ್ ಬರುತ್ತಿದ್ದು, ಹೊಸ ಬೋಟುಗಳು ಸಮುದ್ರಕ್ಕೆ ತೆರಳಲು ಅವಕಾಶವಿಲ್ಲ ಈಗಾಗಲೇ ಬೋಟುಗಳಿಗೆ ನೀಡಲಾಗುವ ಇಂದನ ಸಬ್ಸಿಡಿಯನ್ನು ಸಸ್ಪೆಂಡ್ ಮಾಡಲಾಗಿದೆ, ಮಲ್ಪೆ ಬಂದರಿನ ಕಾರ್ಯ ಚಟುವಟಿಕೆಗಳಿಗೆ ಇಂದು ಕೊನೆಯ ದಿನವಾಗಿದ್ದು, ಸರಕಾರದ ಆದೇಶವನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾತನಾಡಿ, ಸಾರ್ವಜನಿಕರು ಈ ಅವಧಿಯಲ್ಲಿ ಪೊಲೀಸರೊಂದಿಗೆ ಅನವಶ್ಯಕ ವಾದ ಮಾಡಬೇಡಿ , ಸರಕಾರದ ನಿಬರ್ಂದಗಳನ್ನು ಪಾಲಿಸಿ, ನಿಮ್ಮ ಆರೋಗ್ಯದ ದೃಷ್ಠಿಯಿಂದ ಈ ನಿರ್ಬಂದಗಳನ್ನು ವಿಧಿಸಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ದ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಉಪಸ್ಥಿತರಿದ್ದರು.