ಕೊರೋನಾ ಪತ್ತೆಗೆ ಜಿಲ್ಲೆಯಲ್ಲಿ  ಪ್ರಯೋಗಾಲಯ ಸ್ಥಾಪನೆ: ಶೋಭಾ ಕರಂದ್ಲಾಜೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಶಂಕಿತ ಕೊರೋನ ರೋಗಿಗಳಲ್ಲಿನ , ಕರೋನಾ ಪತ್ತೆ ಹಚ್ಚಲು , ಅವರು  ಗಂಟಲಿನ ಮಾದರಿಯನ್ನು ಪರೀಕ್ಷಿಸಲು ಜಿಲ್ಲೆಯಲ್ಲಿಯೇ ಪ್ರಯೋಗಾಲಯ ತೆರೆಯುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಡುಪಿ  ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅವರು ಶನಿವಾರ, ಉಡುಪಿ ನಗರಸಭೆಯಿಂದ ಕೊರೋನಾ ನಿಯಂತ್ರಣ ಕುರಿತಂತೆ ಸುರಕ್ಷಿತವಾಗಿ ಕೈ ತೊಳೆಯುವ ಕುರಿತಂತೆ ಜನಜಗೃತಿ ಮೂಡಿಸಲು ಆರಂಭಿಸಿರುವ, ಸ್ಯಾನಿಟೈಸರ್ ಸಹಿತ  ನಳ್ಳಿ ನೀರು ಸೌಲಭ್ಯ ಉದ್ಘಾಟಿಸಿ ಮಾತನಾಡಿದರು.

ಉಡುಪಿಯ ಜಿಲ್ಲಾಸ್ಪತ್ರೆ ಅಥವಾ ಕೆ.ಎಂ.ಸಿ ಯಲ್ಲಿ ಕೊರೋನಾ ಪತ್ತೆ ಹಚ್ಚುವ ಪ್ರಯೋಗಾಲಯ  ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರವು ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಚೀನಾದಲ್ಲಿಕೊರೊನಾ ವೈರಸ್ ಪತ್ತೆಯಾದ ದಿನಗಳಿಂದಲೇ ಪ್ರಧಾನಿ ಮೋದಿಯವರು ದೇಶವನ್ನು ಜಾಗೃತಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಲಕ್ಷಾಂತರ ಜನರು ಸೇರುತ್ತಿದ್ದರೂ ಕೂಡ ದೇಶದಲ್ಲಿ , ಕೊರೋನ ಸಾವು-ನೋವಿನ ಸಂಖ್ಯೆ ಕಡಿಮೆಯಾಗಲು ಸರಕಾರ, ಆರೋಗ್ಯ ಇಲಾಖೆ ಹಾಗೂ ಮಾಧ್ಯಮದವರು ಮೂಡಿಸಿರು ಜಾಗೃತಿ ಕಾರಣ ಎಂದು ಶೋಭಾ ಕರಂದ್ಲಾಜೆ  ತಿಳಿಸಿದರು.

ಈಗಾಗಲೇ ವಿದೇಶದಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಸೋಂಕು ಮುಂದಿನ ದಿನಗಳಲ್ಲಿ ಹರಡುವುದು ಕಡಿಮೆಯಾಗುವ ನಿರೀಕ್ಷೆ ಇದೆ. ಹಾಗೂ ಸೋಂಕಿರುವ ಹಾಗೂ ಶಂಕಿತರಿಗಾಗಿ ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿದ್ದು,ಚಿಕಿತ್ಸೆಗೆ ಪೂರಕವಾದಎಲ್ಲಾ ಸಮಾಗ್ರಿಗಳನ್ನು ಹೊಂದಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿದೇಶದಲ್ಲಿ ವಾಸಿಸುತ್ತಿರುವ ಜನರುಭಾರತಕ್ಕೆ ಬರುವ ಬದಲುತಮ್ಮ ವಾಸ್ಥನದಲ್ಲೇಇದ್ದು, ತಮ್ಮಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಭಾರತವನ್ನು ಕೊರೊನಾ ಮುಕ್ತವಾಗಿಸಲು ಸಹಕರಿಸಬೇಕು ಎಂದು ಸಂಸದೆ ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘಪತಿ ಭಟ್, ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ಪೌರಾಯುಕ್ತ ಆನಂದ ಕಲ್ಲೋಳಿಕರ್ ಡಿಹೆಚ್‍ಓ ಡಾ.ಸುಧೀರ್‍ಚಂದ್ರ ಸೂಡ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೆವ ಉಪಾಧ್ಯಾಯ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.