ಶನಿವಾರ ಸಂತೆಗೆ ನಿಷೇಧ: ಜನರಿಲ್ಲದೇ ಬಣಗುಟ್ಟಿದ ಕುಂದಾಪುರದ ಎಪಿಎಂಸಿ ವಠಾರ ಜನತಾ ಕಫ್ರ್ಯೂ ಆತಂಕ: ಮೀನಂಗಡಿಗಳಲ್ಲಿ ಮೀನು ಖರೀದಿ ಬಲುಜೋರು!

ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಉಂಟಾಗದಂತೆ ಜಿಲ್ಲಾಧಿಕಾರಿಯವರು ವಿಧಿಸಿರುವ 144(3) ಸೆಕ್ಷನ್‍ನಿಂದಾಗಿ ಶನಿವಾರ ನಡೆಯಬೇಕಿದ್ದ ಕುಂದಾಪುರ ಸಂತೆ ರದ್ದುಗೊಂಡಿದೆ.

ಈ ಬಗ್ಗೆ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ನಾಲ್ಕು ದಿನ ಮುಂಚಿತವಾಗಿಯೇ ಎಲ್ಲಾ ವ್ಯಾಪರಸ್ಥರಿಗೂ ನೋಟೀಸ್ ನೀಡಿದ್ದರಿಂದ ಶನಿವಾರ ಸಂತೆ ನಡೆಯುವ ಕುಂದಾಪುರದ ಎಪಿಎಂಸಿ ವಠಾರ ವ್ಯಾಪಾರಸ್ಥರು-ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು.

ಎಲ್ಲೆಲ್ಲೂ ಕೊರೋನಾ ವೈರಸ್ ಭೀತಿ ಎದುರಾಗುತ್ತಿದ್ದಂತೆಯೇ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ವಿರಳವಾಗಿದ್ದು, ಕಳೆದ ಶನಿವಾರ ನಡೆದಿರುವ ಸಂತೆಯಲ್ಲೂ ಗ್ರಾಹಕರ ಸಂಖ್ಯೆ ತುಂಬಾ ಇಳಿಮುಖವಾಗಿದ್ದು ವ್ಯಾಪಾರಸ್ಥರು ಸಪ್ಪೆಮೋರೆ ಹಾಕಿಕೊಂಡು ವಾಪಾಸಾಗಿದ್ದರು. ಆದರೆ ಈ ಭಾರಿ ಜಿಲ್ಲಾಡಳಿತವೇ ಸಂತೆ ನಡೆಸದಂತೆ ಆದೇಶ ಹೊರಡಿಸಿದ್ದರಿಂದ ವಾರಾಂತ್ಯದಲ್ಲಿ ನಡೆಯುವ ಸಂತೆಗೆ ಬ್ರೇಕ್ ಬಿದ್ದಿದೆ. ಇನ್ನು ದಿನಸಿ ಸಾಮಾನು, ತರಕಾರಿ, ಹೂವು-ಹಣ್ಣು, ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಎಪಿಎಂಸಿ ವರಾಂಡ ಜನರಿಲ್ಲದೆ ಬಣಗುಡುತ್ತಿತ್ತು.

ನಿಷೇಧ ಮೀರಿ ವ್ಯಾಪಾರ:
ಶನಿವಾರ ಸಂತೆಯ ಕುರಿತು ವ್ಯಾಪಾರಸ್ಥರು ಹಾಗೂ ಗ್ರಾಹಕರಲ್ಲಿ ಗೊಂದಲ ಉಂಟಾಗಬಾರದೆಂದು ನಾಲ್ಕೈದು ದಿನಗಳ ಮುಂಚಿತವಾಗಿಯೇ ಎಪಿಎಂಸಿ ಸೂಚನೆ ನೀಡಿತ್ತು. ಆದರೂ ಸಂತೆಯ ಮೊದಲ ದಿನವಾದ ಶುಕ್ರವಾರ ಬಾಳೆ ಕಾಯಿ ಇನ್ನಿತರ ವ್ಯಾಪರಸ್ಥರು ತಮ್ಮ ವಾಹನಗಳಲ್ಲಿ ಲೋಡ್ ಮಾಡಿಕೊಂಡು ವ್ಯಾಪಾರಕ್ಕಾಗಿ ಬಂದಿದ್ದರು. ಎಪಿಎಂಸಿ ಗೇಡಿಗೆ ಬೀಜ ಹಾಕಿದ್ದರಿಮದಾಗಿ ಎಲ್ಲರೂ ಹೊರಗಡೆಯೇ ವ್ಯಾಪಾರಕ್ಕೆ ಮುಂದಾಗಿದ್ದರು. ಇದು ಶನಿವಾರವು ಮುಂದಿವರೆಯಿತು. ಸಂತೆ ನಿಷೇಧದ ಮಾಹಿತಿ ಇಲ್ಲದ ವ್ಯಾಪರಸ್ಥರು ದೂರದ ಹುಬ್ಬಳ್ಳಿ. ಕಾರವಾರ ಭಾಗಗಳಿಂದ ತರಕಾರಿ, ಹಣ್ಣುಗಳನ್ನು ತಂದಿದ್ದರು. ಕುಂದಾಪುರ ಎಪಿಎಂಸಿ ವಠಾರಕ್ಕೆ ಆಗಮಿಸುತ್ತಿದ್ದಂತೆ ನಿಷೇಧದ ಸುದ್ದಿ ತಿಳಿದು ರಸ್ತೆ ಬದಿಯಲ್ಲಿ ತಂದ ತರಕಾರಿ-ಹಣ್ಣುಗಳ ವ್ಯಾಪಾರ ನಡೆಸಿದರು.

ತರಕಾರಿಗಾಗಿ ಮುಗಿಬಿದ್ದ ಗ್ರಾಹಕರು:
ಸ್ಥಳೀಯ ನಿವಾಸಿಗಳು, ಗ್ರಾಮೀಣ ಭಾಗದ ವ್ಯಾಪಾರಸ್ಥರು ಭಾನುವಾರ ನಡೆಯುವ ಜನತಾ ಕಫ್ರ್ಯೂ ಗಮನದಲ್ಲಿಸಿಕೊಂಡು ತರಕಾರಿ ಕೊಂಡುಕೊಳ್ಳಲು ಮುಗಿಬೀಳುತ್ತಿರುವ ದೃಶ್ಯ ಕಂಡುಬಂದಿತು. ಎಪಿಎಂಸಿ ಆವರಣ ಹೊರಗಿನ ರಾ.ಹೆದ್ದಾರಿ 66 ರ ಸರ್ವೀಸ್ ರಸ್ತೆಯ ಬದಿ ಹಾಗೂ ವಾಹನಗಳ ಮೇಲೆ ತರಕಾರಿ, ಹಣ್ಣು, ದಿನಸಿ ಸಾಮಾಗ್ರಿಗಳನ್ನು ಇರಿಸಿಕೊಂಡು ವ್ಯಾಪಾರದಲ್ಲಿ ತೊಡಿಕೊಂಡಿರುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನ ಎರಡು ಗಂಡೆಯ ತನಕವೂ ವ್ಯಾಪಾರಸ್ಥರು ಸುಡುಬಿಸಿಲಿನ ನಡುವೆಯೂ ವ್ಯಾಪಾರದಲ್ಲಿ ತೊಡಗಿಕೊಂಡರು.

ಮೀನಂಗಡಿಗಳಲ್ಲಿ ಮೀನುಗಳ ಖರೀದಿ ಬಲುಜೋರು:
ಪ್ರಧಾನಿ ನರೇಂಂದ್ರ ಮೋದಿಯವರ ಸೂಚನೆಯಂತೆ ಭಾನುವಾರ ನಡೆಯುವ ಜನತಾ ಕಫ್ರ್ಯೂಗೆ ಜನರೆಲ್ಲರೂ ಸನ್ನದ್ದರಾಗಿದ್ದಾರೆ. ಹೀಗಾಗಿಯೇ ಅಗತ್ಯವಿರುವ ಸಾಮಾಗ್ರಿಗಳನ್ನೆಲ್ಲಾ ಸಾರ್ವಜನಿಕರು ಶನಿವಾರವೇ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕುಂದಾಪುರದ ಎಪಿಎಂಸಿ ಹೊರಗಿನ ಬಹುತೇಕ ಮೀನು ಅಂಗಡಿಗಳಲ್ಲಿ ಶನಿವಾರ ವ್ಯಾಪಾರ ಜೋರಾಗಿತ್ತು. ಸಂತೆಯಲ್ಲಿ ತರಕಾರಿ ಕೊಂಡುಕೊಂಡವರು ಮೀನನ್ನು ಖರೀದಿಸಿ ಮನೆಗೆ ವಾಪಾಸಾದ ದೃಶ್ಯ ಕಂಡುಬಂದಿತು.

ಚಿಕನ್‍ಸಾಲ್ ರಸ್ತೆಯಲ್ಲಿ ವ್ಯಾಪಾರ ಜೋರು:
ಸಂತೆ ರದ್ದಾಗಿರುವ ವಿಚಾರ ತಿಳಿಯದ ಬಹುತೇಕ ವ್ಯಾಪಾರಸ್ಥರು ಕುಂದಾಪುರದ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ವ್ಯಪಾರದಲ್ಲಿ ತಲ್ಲೀನರಾಗಿರುವುದು ಕಂಡುಬಂದಿತು. ಸಂಗಮ್ ಜಂಕ್ಷನ್ ಆರಂಭದ ಚಿಕನ್‍ಸಾಲ್ ರಸ್ತೆ ಬದಿಯಲ್ಲೂ ವ್ಯಾಪಾರಸ್ಥರು ತರಕಾರಿ, ಹಣ್ಣುಗಳ ಮಾರಾಟದಲ್ಲಿ ನಿರತಾಗಿದ್ದರು.

-ಶಕೀಲ್, ತರಕಾರಿ ವ್ಯಾಪಾರಸ್ಥ ಹುಬ್ಬಳ್ಳಿ
ಹಲವು ವರ್ಷಗಳಿಂದ ತರಕಾರಿ ಮಾರಲು ದೂರದ ಹುಬ್ಬಳ್ಳಿಯಿಂದ ಕುಂದಾಪುರದ ಸಂತೆಗೆ ಬರುತ್ತಿದ್ದೇನೆ. ಕೊರೋನಾ ವೈರಸ್ ತಡೆಗಟ್ಟಲು ಸಂತೆ ರದ್ದುಗೊಳಿಸಿರುವ ವಿಚಾರ ನನಗೆ ಗೊತ್ತಿಲ್ಲ. ಎಂದಿನಂತೆ ಈ ಬಾರಿಯೂ ಬಂದಿದ್ದೇನೆ. ಮರಳಿ ಊರಿಗೆ ಹೋದರೆ ವ್ಯಾಪಾರಕ್ಕೆಂದು ತಂದಿರುವ ತರಕಾರಿಗಳು ಹಾಳಾಗುತ್ತದೆ. ಅದಕ್ಕಾಗಿ ರಸ್ತೆ ಬದಿ ಕೂತು ವ್ಯಾಪಾರ ನಡೆಸುತ್ತಿದ್ದೇನೆ. ವ್ಯಾಪಾರವೂ ಜೋರಾಗಿದೆ.

-ಕರಿಬಸಪ್ಪ, ಹಣ್ಣು ವ್ಯಾಪಾರಸ್ಥ ಕಾರವಾರ
ಶನಿವಾರ ಸಂತೆ ರದ್ದಾಗಿರುವ ಬಗ್ಗೆ ನಮಗೆ ಮೊದಲೇ ತಿಳಿಸಿದ್ದಾರೆ. ಆದರೆ ಪ್ರತೀ ಬಾರಿಯೂ ಬರುತ್ತಿರುವಂತೆ ಈ ಬಾರಿಯೂ ಬಂದಿದ್ದೇವೆ. ಶನಿವಾರದ ಸಂತೆಗಾಗಿಯೇ ನಾಲ್ಕು ದಿನಗಳ ಹಿಂದೆ ಹಣ್ಣುಗಳನ್ನು ಶೇಖರಿಸಿಟ್ಟಿದ್ದೇವೆ. ಸಂತೆಗೆ ಬಾರದಿದ್ದರೆ ನಷ್ಟ ಉಂಟಾಗುತ್ತದೆ. ಸಂತೆ ರದ್ದುಗೊಂಡಿರುವ ವಿಚಾರ ತಿಳಿಯದೆ ಇರುವ ಗ್ರಾಹಕರು ಸಂತೆಗೆ ಬರುತ್ತಾರೆಂಬ ಆಸೆಯೊಂದಿಗೆ ಬಂದಿದ್ದೇನೆ.