ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಕೊರೊನಾ ವೈರಸ್ (ಕೋವಿಡ್ – 19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ಮಾರ್ಚ್ 23ರಿಂದ ಅನ್ವಯವಾಗುವಂತೆ ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ ಚಿಕಿತ್ಸೆ ಮಾತ್ರ ನೀಡಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ
ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನು ಹೊರಭಾಗದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿ ನಂತರ ಮುಂದಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆಯ ಸಂಬಂಧಿಸಿದ ವಿಭಾಗದ ವ್ಯೆದ್ಯರಿಂದ ಚಿಕಿತ್ಸೆಗೆ ಅವಕಾಶ ನೀಡಲಾಗುವುದು. ಅತ್ಯವಶ್ಯ ಚಿಕಿತ್ಸೆಯ ಅಗತ್ಯ ಇರದೆ ಇರುವ ರೋಗಿಗಳನ್ನು, ಮುಂದಿನ ದಿನಾಂಕ ದಲ್ಲಿ ಆಸ್ಪತ್ರೆಗೆ ಬರುವಂತೆ ತಿಳಿಸಲಾಗುವುದು.
ತೀವ್ರ ನಿಗಾ ಘಟಕಗಳಿಗೆ (ಐಸಿಯು) ಪ್ರವೇಶ ಮತ್ತು ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನಿಗಾ ಘಟಕಗಳ ಪ್ರವೇಶದ ನಿರ್ಬಂಧವನ್ನು ಮುಂದುವರಿಸಲಿದೆ. ಆದಾಗ್ಯೂ ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.