ಸ್ವಯಂ ಜನತಾ ಕರ್ಪ್ಯೂ ವಿಧಿಸಿಕೊಳ್ಳಿ: ಭಾರತೀಯರಲ್ಲಿ ಪ್ರಧಾನಿ ಮೋದಿ ಮನವಿ

ನವದೆಹಲಿ: ಪ್ರಪಂಚದಾದ್ಯಂತ ಹುಟ್ಟಿಕೊಂಡಿರುವ ಕೊರೊನಾ ವೈರಸ್ ಭಾರತದಲ್ಲಿ ಹರಡುತ್ತಿದ್ದು, ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ವೈರಸ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಂದು (ಗುರುವಾರ) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾವೈರಸ್ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.22ರಂದು ಭಾನುವಾರ ಸ್ವಯಂ ‘ಜನತಾ ಕರ್ಫ್ಯೂ’ ವಿಧಿಸಿಕೊಳ್ಳಬೇಕು ಎಂದು ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜನಸಾಮಾನ್ಯರು ಅಂದು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ತಮ್ಮ ತಮ್ಮ ಮನೆಯಲ್ಲೇ ಇರಬೇಕು. ಯಾರೂ ಮನೆಯಿಂದ ಹೊರಗಡೆಗೆ ಬರಬೇಡಿ. ವೈದ್ಯಕೀಯ ತುರ್ತು ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿಯುವ ಪ್ರಯತ್ನ ಮಾಡೋಣ. ಇಂದಿನಿಂದಲೇ ಜನತಾ ಕರ್ಫ್ಯೂ ಕುರಿತು ಸ್ಥಳೀಯ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಮತ್ತಯ ಜನಪ್ರತಿನಿಧಿಗಳು ಜನರಲ್ಲಿ ಅರಿವು ಮೂಡಿಸಲಿವೆ ಎಂದು ಹೇಳಿದರು.

ಕೊರೊನಾ ವೈರಸ್ ನಿಯಂತ್ರಣಕ್ಕೆ ಸರಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಪರಿಸ್ಥಿತಿ ಕೈ ಮೀರಿದೆ. ಎಲ್ಲರೂ ಸರಕಾರ, ಸ್ಥಳಿಯಾಡಳಿತದ ಜತೆ ಸಹಕರಿಸಿ ಈ ಮಹಾ ಮಾರಿಯ ನಿಯಂತ್ರಣಕ್ಕೆ ಕೈ ಜೋಡಿಸಲು ಮೋದಿ ವಿನಂತಿಸಿದ್ದಾರೆ.