ಬಳ್ಕೂರಿನ ಎಂಟನೆ ತರಗತಿ ಹುಡುಗ ನೇಣುಬಿಗಿದು ಆತ್ಮಹತ್ಯೆ

ಕುಂದಾಪುರ: ಎಂಟನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹದಿನಾಲ್ಕು ವರ್ಷ ಪ್ರಾಯದ ಬಾಲಕನೋರ್ವ ವಾಸವಾಗಿದ್ದ‌ ಮನೆಯ ಬಚ್ಚಲು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕಳವಳಕಾರಿ ಘಟನೆ ಮಂಗಳವಾರ ಇಲ್ಲಿಗೆ ಸಮೀಪದ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಳ್ಕೂರಿನಲ್ಲಿ ನಡೆದಿದೆ.

ನೇಣು ಬಿಗಿದ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರಾದರೂ ಅಷ್ಟರಲ್ಲಾಗಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಳ್ಕೂರಿನ ನಿವಾಸಿ ಎಂಟನೇ ತರಗತಿ ವಿದ್ಯಾರ್ಥಿ ಚರಣ್(14) (ಹೆಸರು ಬದಲಿಸಲಾಗಿದೆ) ಎಂಬಾತನೇ ಸಾವನ್ನಪ್ಪಿದ ಬಾಲಕ.
ಬಳ್ಕೂರಿನ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದ ಮಕ್ಕಳೊಂದಿಗೆ ಆಟ ವಾಡುತ್ತಿದ್ದ ಚರಣ್ ಇದ್ದಕ್ಕಿದ್ದಂತೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣ ಆಟವಾಡುತ್ತಿದ್ದ ಮಕ್ಕಳು ನೆರೆ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಬಂದು ಬಾಲಕನನ್ನು ಕೆಳಗೆ ಇಳಿಸಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಬಾಲಕ ಗಂಭೀರ ಸ್ಥಿತಿಯಲ್ಲಿದ್ದುದನ್ನು ಕಂಡ ಅಲ್ಲಿನ ವೈದ್ಯರು ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದು, ಬಾಲಕ ಆಸ್ಪತ್ರೆ ತಲುಪುವಷ್ಟರಲ್ಲೆ ಅಸು ನೀಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ದುರ್ದೈವಿ ಬಾಲಕ ತನ್ನ ಚಿಕ್ಕಮ್ಮನ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದ. ಚಿಕ್ಕಮ್ಮ ಮತ್ತು ಚಿಕ್ಕಪ್ಪ ಉದ್ಯೋಗ ನಿಮಿತ್ತ ಪ್ರತಿ ದಿನ ಬೆಳಗ್ಗೆ ಮನೆಯಿಂದ ಹೊರಗೆ ಹೋಗುತ್ತಿದ್ದರು. ಕೊರೊನಾ ವೈರಸ್‍ನಿಂದಾಗಿ ಸರ್ಕಾರ ರಜೆ ಘೋಷಿಸಿದ್ದರಿಂದ ಚಿಕ್ಕಮ್ಮನ ಮಕ್ಕಳು ಹಾಗೂ ಈತ ಮನೆಯಲ್ಲಿಯೇ ಆಟವಾಡುತ್ತಿದ್ದರು. ಆದರೆ ಬಾಲಕ ಯಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.