ಕೊಲ್ಲೂರಿನಲ್ಲಿ ಕಳೆಗುಂದಿತು ಜಾತ್ರೆಯ ವೈಭವ: ಎಲ್ಲೆಲ್ಲೂ ಕೊರೋನಾ ಭಯದ್ದೇ ಹವಾ !

ಕುಂದಾಪುರ : ಬಹಳ ವಿಜೃಂಭಣೆಯಿಂದ ಮಂಗಳವಾರ ನಡೆಯಬೇಕಾಗಿದ್ದ ಇತಿಹಾಸ ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವವು ಕೊರೊನಾ ವೈರಸ್ ಭೀತಿಯಿಂದಾಗಿ ಸರಳವಾಗಿ ಸೀಮಿತ ಸಂಖ್ಯೆಯ ಉಪಸ್ಥಿತಿಯಲ್ಲಿ ಮಂಗಳವಾರ ಜರುಗಿತು.

ತಂತ್ರಿ ನಿತ್ಯಾನಂದ ಅಡಿಗರು ಪ್ರಾಯಶ್ಚಿತ್ತ ವಿಧಿಗಳನ್ನು ಪೂರೈಸಿದ ಬಳಿಕ, ರಥೋತ್ಸವದ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸಲಾಯಿತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ೧.೦೫ ಕ್ಕೆ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಯಿತು. ಉತ್ಸವದ ಅಂಗವಾಗಿ ದಿನಂಪ್ರತಿ ನಡೆಯುವ ವಿವಿಧ ಧಾರ್ಮಿಕ ವಿಧಿಗಳ ಜತೆಯಲ್ಲಿ ಊರಿನ ಪ್ರಮುಖ ರಸ್ತೆಯಲ್ಲಿ ದೇವರ ಉತ್ಸವ ಮೂರ್ತಿ ಉತ್ಸವ ನಡೆಸಲಾಗುತ್ತದೆ. ಮಾ.೧೦ ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶ್ರೀ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾ.೧೧ ರಂದು ಮಾಂಗಲ್ಯೋತ್ಸವ ಮಯೂರಾರೋಹಣೋತ್ಸವ, ಮಾ.೧೨ರಂದು ಡೋಲಾರೋಹಣೋತ್ಸವ, ಮಾ.೧೩ ರಂದು ಪುಷ್ಪಮಂಟಪಾರೋಹಣೋತ್ಸವ, ಮಾ.೧೪ ರಂದು ವೃಷಭಾರೋಹಣೋತ್ಸವ, ಮಾ.೧೫ ರಂದು ಗಜಾರೋಹಣೋತ್ಸವ, ಮಾ.೧೬ ರಂದು ಸಿಂಹಾರೋಹಣೋತ್ಸವ, ಮಾ.೧೭ರ ಮಂಗಳವಾರದಂದು ಮಧ್ಯಾಹ್ನ ರಥಾರೋಹಣ ಹಾಗೂ ಸಂಜೆ ೫.೩೦ ಕ್ಕೆ ರಥಾವರೋಹಣ ನಡೆದಿದೆ.

ರಾಜ್ಯದಲ್ಲಿ ಹರಡುತ್ತಿರುವ ಕೊರನಾ ವೈರಸ್ ತಡೆಗಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಾಂತ ಉತ್ಸವ ಆಚರಣೆ ಸೇರಿದಂತೆ ವಿವಿಧ ಸಾರ್ವಜನಿಕ ಆಚರಣೆಗೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವವನ್ನು ಸರಳವಾಗಿ ಸೀಮಿತ ಸಂಖ್ಯೆಯ ಉಪಸ್ಥಿತಿಯಲ್ಲಿ ಆರೋಹಣಾ ಹಾಗೂ ಅವರೋಹಣವನ್ನು ನಡೆಸುವಂತೆ ಜಿಲ್ಲಾಡಳಿತ ದೇವಸ್ಥಾನದ ಪ್ರಮುಖರಿಗೆ ಸೋಮವಾರವೇ ಖಡಕ್ ಸೂಚನೆ ನೀಡಿತ್ತು.

ಪ್ರತಿ ವರ್ಷದ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಬೆಳಿಗ್ಗೆಯ ಧಾರ್ಮಿಕ ವಿಧಿ ಆಚರಣೆಯ ಬಳಿಕ ದೇವಸ್ಥಾನ ಮುಂಭಾಗದಲ್ಲಿ ಇರುವ ಬ್ರಹ್ಮ ರಥದಲ್ಲಿ ದೇವರನ್ನು ಕುಳ್ಳಿರಿಸಿ ಬೀದಿ ಗಣಪತಿ ದೇವಸ್ಥಾನದವರೆಗೆ ರಥವನ್ನು ಎಳೆದು ರಥೋತ್ಸವ ನಡೆಸಲಾಗುತ್ತೆ. ಸಂಜೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥ ಬೀದಿಯಲ್ಲಿ ಬ್ರಹ್ಮ ರಥವನ್ನು ಶಂಕರಾಶ್ರಮದ ವರೆಗೆ ಕೊಂಡೊಯ್ಯಲಾಗುತ್ತಿತ್ತು. ಜಾತ್ರೆಯ ತೇರಿನ ಈ ವೈಭವಕ್ಕೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷೀಯಾಗುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ರಥ ಬೀದಿಯಲ್ಲಿ ತೇರು ಎಳೆಯುವುದಕ್ಕೆ ನಿರ್ಬಂಧ ವಿಧಿಸಿದ್ದರಿಂದ ಸಂಜೆ ಗಣಪತಿ ದೇವಸ್ಥಾನದಿಂದಲೆ ರಥಾವರೋಹಣ ನಡೆಸಿ ಶ್ರೀ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.

ಸರ್ಕಾರದ ಆದೇಶ ಗಾಳಿಗೆ:
ರಥೋತ್ಸವದ ಆಚರಣೆಯಲ್ಲಿ ಅತ್ಯಂತ ಪ್ರಮುಖ ವಿಧಿಗಳನ್ನು ಪೂರೈಸುವ ತಂತ್ರಿ ನಿತ್ಯಾನಂದ ಅಡಿಗರು ದೇವಸ್ಥಾನಕ್ಕೆ ಬರುವ ವೇಳೆಯಲ್ಲಿ ದೇಗುಲದ ಧ್ವಜಸ್ತಂಭದ ಬಳಿಯಲ್ಲಿ ಅಶುದ್ಧವಾಯಿತು ಎನ್ನುವ ಕಾರಣಕ್ಕಾಗಿ ಮನೆಗೆ ಹಿಂತಿರುಗಿ ಸ್ನಾನಾದಿಗಳನ್ನು ಪೂರೈಸಿ ದೇವಸ್ಥಾನಕ್ಕೆ ಬಂದು ಪ್ರಾಯಶ್ಚಿತ್ತ ವಿಧಿಗಳನ್ನು ಪೂರೈಸಿದ ಬಳಿಕ, ರಥೋತ್ಸವದ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸಲಾಗಿತ್ತು. ಇದರಿಂದಾಗಿ ಬೆಳಿಗ್ಗೆ ೯.೩೦ ಕ್ಕೆ ಪ್ರಾರಂಭವಾಗಬೇಕಾಗಿದ್ದ ರಥೋತ್ಸವದ ಆರೋಹಣ ಮಧ್ಯಾಹ್ನ ೧೧.೩೫ ಪ್ರಾರಂಭವಾಗಿತ್ತು. ಬೆಳಿಗ್ಗೆಯೇ ನಿರ್ಧರಿತ ಮಹೂರ್ತದಲ್ಲಿ ರಥೋತ್ಸವ ಆಚರಣೆಯನ್ನು ಸರಳವಾಗಿ ಮುಗಿಸಬೇಕು ಎನ್ನುವ ಸರ್ಕಾರದ ಆದೇಶವಿದ್ದರೂ, ಗಂಟೆಗಟ್ಟಲೆ ತಡವಾಗಿ ರಥೋತ್ಸವ ನಡೆಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ದೇವಸ್ಥಾನದ ಪ್ರಮುಖರೊಂದಿಗೆ ಬಿರುಸಿನ ವಾಗ್ವಾದ ನಡೆಸಿದರು

ಮಾಸ್ತಿಕಟ್ಟೆ ಬಳಿ ಭಕ್ತರಿಗೆ ತಡೆ:
ಜಿಲ್ಲಾಡಳಿತ ಸೂಚನೆಯ ಹಿನ್ನೆಲೆಯಲ್ಲಿ ಉಪ ವಿಭಾಗದ ಪೊಲೀಸ್ ಎಎಸ್‌ಪಿ ಹರಿರಾಂಶಂಕರ ಅವರು, ರಥೋತ್ಸವದ ವೇಳೆ ದೇವಸ್ಥಾನಕ್ಕೆ ಸಂಬಂಧಿಸಿದವರ ಹೊರತಾಗಿ ಸಾರ್ವಜನಿಕ ಪ್ರವೇಶ ಇರುವುದಿಲ್ಲ ಎಂದು ಮಾಧ್ಯಮಗಳಿಗೂ ತಿಳಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೆ ಶಿವಮೊಗ್ಗ, ಕುಂದಾಪುರ ಹಾಗೂ ಬೈಂದೂರು ಭಾಗದಿಂದ ಬರುವ ಸಾರ್ವಜನಿಕರು ಹಾಗೂ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ರಥೋತ್ಸವಕ್ಕೆ ಸಾರ್ವಜನಿಕ ಪ್ರವೇಶ ಇಲ್ಲ ಎನ್ನುವ ಮಾಹಿತಿ ತಿಳಿಯದೆ ಬೇರೆ ಬೇರೆ ಭಾಗದಿಂದ ಬಂದಿದ್ದ ಭಕ್ತರಿಗೆ ಮಾಸ್ತಿಕಟ್ಟೆಯ ಬಳಿಯಲ್ಲಿ ತಡೆ ಹಾಕಿದ್ದರಿಂದಾಗಿ ದೇವರಿಗಾಗಿ ತಂದೆ ಕಾಯಿ, ಹಣ್ಣು, ಹೂವುಗಳನ್ನು ಅಲ್ಲಿಯೇ ಇಟ್ಟು ಅವರು ಹಿಂತಿರುಗಿದ್ದರು. ಈ ವಿಷಯ ತಿಳಿದ ದೇವಸ್ಥಾನದವರು ವಾಹನವನ್ನು ಕಳುಹಿಸಿ ಭಕ್ತರು ತಂದಿದ್ದ ವಸ್ತುಗಳನ್ನು ದೇಗುಲಕ್ಕೆ ತಂದರು. ರಥೋತ್ಸವದ ಕಾರಣಕ್ಕಾಗಿ ರಾಜ್ಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ವಾಹನ ನಿಲುಗಡೆ ಹಾಗೂ ನಿರ್ಬಂಧ ಮಾಡಿರುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಪೊಲೀಸರೊಂದಿಗೆ ಮಾತಿನ ಚಕಮಕಿಯನ್ನು ನಡೆಸಿದರು.

ಮಾಸ್ಕ್ ಧರಿಸಿ ಕರ್ತವ್ಯ:
ಕೊರೊನಾ ಭೀತಿ ಹಾಗೂ ರಥೋತ್ಸವಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಎಎಸ್‌ಪಿ ಹರಿರಾಂಶಂಕರ ಅವರ ನೇತ್ರತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ಸಿಬ್ಬಂದಿಗಳು ಮಾಸ್ಕ್ ಧರಿಸಿ ತಮ್ಮ ಕರ್ತವ್ಯವವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್‌ಕುಮಾರ ಎಂ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೆ.ವಿ.ಶ್ರೀಧರ ಅಡಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಅಭಿಲಾಷ್ ಪಿ.ವಿ, ನರಸಿಂಹ ಹಳಗೇರಿ, ರಾಜೇಶ್ ಕಾರಂತ್. ಜಯಂತಿ ವಿಜಯಕೃಷ್ಣ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಚುಚ್ಚಿ ನಾರಾಯಣ ಶೆಟ್ಟಿ ಇದ್ದರು.