ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಉಡುಪಿಯ ಯುವಕ ಸಾವು

ಉಡುಪಿ: ಬೆಂಗಳೂರಿನ ಜಿಗಣಿಯ ಜೆವಿಕೆ ಕಂಪೆನಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಉಡುಪಿಯ ಯುವಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರು ರಾಮಚಂದ್ರ ದೇವಾಡಿಗ (27), ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಕಳೆದ ವರ್ಷ ಆ.20ರಂದು ಬೈಕಲ್ಲಿ ತೆರಳುತ್ತಿದ್ದಾಗ ಬಿಎಂಟಿಸಿ ಬಸ್ಸು ಡಿಕ್ಕಿ ಹೊಡೆದು ತಲೆಗೆ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಬೈಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮಣಿಪಾಲಕ್ಕೆ ಕರೆ ತಂದು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ತಿಂಗಳ ಕಾಲ ಕೋಮಾದಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರು ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರರನ್ನು ಅಗಲಿದ್ದಾರೆ.