ಕುಂದಾಪುರ: ಹೆಮ್ಮಾಡಿಯ ಪ್ರಸಿದ್ದ ಬೀಡಿ ಉದ್ಯಮಿ ಯು.ನರಸಿಂಹ ಶೇರುಗಾರ್(೭೮) ವಯೋಸಹಜ ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು.
ಕುಂದಾಪುರ ಮೀನು ಮಾರುಕಟ್ಟೆ ರಸ್ತೆಯ ನಿವಾಸಿಯಾಗಿರುವ ಯು. ನರಸಿಂಹ ಶೇರುಗಾರ್ ಅವರು, ಆರಂಭದಲ್ಲಿ ಅಂಗಡಿ ಮಾಲೀಕರಾಗಿ ಜೊತೆಗೆ ಚಿಪ್ಪು ಉದ್ಯಮ ನಡೆಸಿದ್ದರು. ಬಳಿಕ ಕುಂದಾಪುರದಲ್ಲೆ ಬೀಡಿ ಉದ್ಯಮ ಆರಂಭಿಸಿ ನಿರಂತರ ಮೂವತ್ತೈದು ವರ್ಷಗಳ ಕಾಲ ತಾಲೂಕಿನ ವಿವಿಧೆಡೆಗಳಲ್ಲಿ ಬೀಡಿ ಬ್ರ್ಯಾಂಚುಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಮಹಿಳೆಯರು, ಯುವತಿಯರಿಗೆ ಉದ್ಯೋಗ ಒದಗಿಸಿದ್ದರು. ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದ ಯು ನರಸಿಂಹ ಶೇರುಗಾರ್ ಅವರು, ಟೆಲಿಫೋನ್ ಸಾಹುಕಾರ್ ಎಂದೇ ಚಿರಪರಿಚಿತರಾಗಿದ್ದರು.
ಮೂವತ್ತು ವರ್ಷಗಳ ಹಿಂದೆ ಹೆಮ್ಮಾಡಿಗೆ ಬಂದು ನೆಲೆಸಿದ ಅವರು, ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿದ್ದರು. ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನ ಸೇರಿದಂತೆ ಊರಿನ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ ಪ್ರೋತ್ಸಾಹ ನೀಡಿದ್ದರು. ಧಾರ್ಮಿಕ ಕ್ಷೇತ್ರವಲ್ಲದೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದ ಅವರು, ಕಳೆದ ಎರಡು ವರ್ಷಗಳಿಂದ ವಯೋಸಹಜ ಅಸೌಖ್ಯದಿಂದಾಗಿ ಹಾಸಿಗೆ ಹಿಡಿದಿದ್ದರು.
ಮೃತರು ಪತ್ನಿ ಪುಷ್ಪಲತಾ ಹಾಗೂ ಮೂವರು ಪುತ್ರರಾದ ಸತ್ಯನಾರಾಯಣ ರಾವ್, ಶಿವಾನಂದ ರಾವ್, ಕೃಷ್ಣಮೂರ್ತಿ ರಾವ್ ಅವರನ್ನು ಅಗಲಿದ್ದಾರೆ.
ಮೃತರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಬೆಳಿಗ್ಗೆ ಎಂಟು ಗಂಟೆಗೆ ಹೆಮ್ಮಾಡಿಯ ರಥಬೀದಿಯಲ್ಲಿರುವ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.