ಚಿತ್ರ ಬರಹ: ಚೈತನ್ಯ ಕುಡಿನಲ್ಲಿ
ಭಾರತದಂತಹ ಧಾರ್ಮಿಕ ನೆಲೆಗಟ್ಟಿನ ದೇಶದಲ್ಲಿ ಪ್ರಸಿದ್ಧ ದೇವಸ್ಥಾನಗಳು ಹಾಗೂ ತೀರ್ಥಕ್ಷೇತ್ರಗಳು ಸದಾ ಜನಜಂಗುಳಿಯಿಂದ ಕೂಡಿರುವುದು ಸರ್ವೇಸಾಮಾನ್ಯ. ಅದರಲ್ಲೂ ರಜೆ ದಿವಸಗಳಲ್ಲಂತೂ ದೇವರಿಗೆ ಫುಲ್ ಡಿಮ್ಯಾಂಡ್. ಪತ್ರಿಕೆಯ ಪರಿಭಾಷೆಯಲ್ಲಿ ಹೇಳುವುದಾದರೆ ಜನಸಾಗರವೇ ಹರಿದು ಬಂದಿರುತ್ತದೆ. ಈ ಜನಸಾಗರದ ಭೋರ್ಗರೆತ, ಘಂಟೆ-ಜಾಗಟೆಗಳ ಪ್ರತಿಧ್ವನಿ ಹಾಗೂ ಅರ್ಚಕರುಚ್ಛರಿಸುವ ವೇದಮಂತ್ರದ ನಡುವೆ ಪುಟಾಣಿ ಮಕ್ಕಳ ಅಳುವಿನ ಧ್ವನಿಯೂ ದೇವಸ್ಥಾನದ ಪರಿಸರವನ್ನು ಆವರಿಸಿರುತ್ತದೆ. ಜನದಟ್ಟನೆಯಿಂದ ಉಂಟಾದ ಗಾಬರಿ ಹಾಗೂ ತಾಳಲಾರದ ಸೆಕೆಯಿಂದ ಅಳುವ ಎಳೆಯ ಕೂಸುಗಳಿಗೆ ಗಾಳಿ ಹಾಕುತ್ತಾ ತಾಯಂದಿರು ಸಮಾಧಾನ ಮಾಡಲೆತ್ನಿಸುವುದು ಮತ್ತು ದೇವಸ್ಥಾನದ ಗಾಂಭೀರ್ಯಕ್ಕೆ ಒಗ್ಗಿಕೊಳ್ಳಲಾಗದೆ ಬೇಗನೆ ತೆರಳುವಂತೆ ಒತ್ತಾಯಿಸುವ ಹುಡುಗಾಟಿಕೆಯ ಮಕ್ಕಳನ್ನು ಅಪ್ಪಂದಿರು ಗದರುವ ದೃಶ್ಯಗಳು ದೇವಸ್ಥಾನಗಳಲ್ಲಿ ತೀರಾ ಸಾಮಾನ್ಯ.
ಉದ್ದದ ಸಾಲುಗಳಲ್ಲಿ ತಾಸುಗಟ್ಟಲೆ ನಿಂತು ದೇವರ ದರ್ಶನವನ್ನು ಪಡೆಯುವ ಸಾಹಸದೊಂದಿಗೆ ಮಕ್ಕಳನ್ನು ಸಂಭಾಳಿಸುವ ಮತ್ತೊಂದು ಸಾಹಸವನ್ನೂ ಏಕಕಾಲದಲ್ಲಿ ಮಾಡಬೇಕಾದಂತಹ ಪರಿಸ್ಥಿತಿ ಪಾಲಕರದ್ದು. ಅದರಲ್ಲೂ ಕೆಲವೊಮ್ಮೆ ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಈ ದೇವರು, ದೇವಸ್ಥಾನ, ಹರಕೆ ಇವುಗಳ ಸಹವಾಸವೇ ಬೇಡವೆನ್ನುವಷ್ಟರಮಟ್ಟಿಗೆ ಕ್ಷಣಕಾಲದಲ್ಲಿ ಹೆತ್ತವರ ಭಕ್ತಿಯನ್ನೇ ವೈರಾಗ್ಯವನ್ನಾಗಿ ಪರಿವರ್ತಿಸುವ ಶಕ್ತಿ ಈ ಮಕ್ಕಳಿಗುಂಟು! ಆದರೆ ಇವುಗಳಿಗೆ ಅಪವಾದವೆಂಬಂತೆ ದೇವಸ್ಥಾನದಲ್ಲಿ ಹೆತ್ತವರನ್ನೂ ಮರೆತು ಮಕ್ಕಳು ಖುಷಿಯಿಂದ ಗಂಟೆಗಳನ್ನು ಬಾರಿಸುತ್ತಾ ನಲಿದಾಡುವ ದೃಶ್ಯ ಕಾಣಬೇಕೆಂದರೆ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಬೇಕು.
ಪ್ರತಿದಿನ ನೂರಾರು ಭಕ್ತಾದಿಗಳ ಆಗಮನದಿಂದಾಗಿ ಪ್ರಸಿದ್ಧನಾಗಿದ್ದರೂ ಯಾವುದೇ ಹವಾ ನಿಯಂತ್ರಿತ ಗುಡಿ ಗೋಪುರಗಳ ಗೋಜಿಗೆ ಸಿಲುಕಿಕೊಳ್ಳದವ ಸೌತಡ್ಕದ ಗಣಪ. ಅನಿಯಮಿತ ಸ್ವಚ್ಛ ಗಾಳಿ ಕೊಡುವ ದೊಡ್ಡ ಅರಳೀ ಮರದ ಕೆಳಗೆ ಶುದ್ಧ ಗಾಳಿ ಸೇವಿಸುತ್ತಾ ವಿರಾಜಮಾನವಾಗಿರುವುದು ಈತನ ವೈಶಿಷ್ಟ್ಯ. ಇತಿಹಾಸದಲ್ಲಿ ಗೋಪಾಲಕರಿಗೆ ಒಲಿದು ಬಂದು ಮರದ ನೆರಳಿನಲ್ಲಿ ನೆಲೆಯೂರಿರುವ ಈ ಗಣಪತಿಗೆ ವನಗಣಪತಿ, ಕುಂಟಾಲ ಗಣಪತಿ ಎಂಬ ನಾಮಧೇಯಗಳೂ ಇವೆಯಂತೆ.
ಒಂದು ಗಂಟೆಯ ಕತೆ:
ಹೀಗೆ ಅತ್ಯಂತ ಸರಳವಾಗಿದ್ದುಕೊಂಡು ಭಕ್ತರನ್ನು ಹರಸುತ್ತಿರುವ ಗಣಪನಿಗೆ ಭಕ್ತರು ಸಲ್ಲಿಸುವ ಹರಕೆಯೂ ತೀರಾ ಸಿಂಪಲ್. ಒಂದು ಗಂಟೆ! ಹೌದು, ಹರಕೆಯ ರೂಪದಲ್ಲಿ ಗಂಟೆಯನ್ನು ದೇವರಿಗೆ ನೀಡುವುದು ಇಲ್ಲಿನ ವೈಶಿಷ್ಟ್ಯ. ಭಕ್ತರು ದೇವರ ಮುಂದೆ ಕೋರಿಕೊಂಡಿದ್ದ ಅಪೇಕ್ಷೆಯು ಸಿದ್ಧಿಸಿದಲ್ಲಿ ತದನಂನತರ ಇಲ್ಲಿಗೆ ಬಂದು ಗಂಟೆಯನ್ನು ಹರಕೆಯಾಗಿ ಸಲ್ಲಿಸುವುದು ವಾಡಿಕೆ. ಹಾಗಾಗಿ ಹಲವು ನಮೂನೆಯ ವಿವಿಧ ಗಾತ್ರದ ನೂರಾರು ಗಂಟೆಗಳು ದೇವಸ್ಥಾನದ ಆವರಣದ ಸುತ್ತಲೂ ಇವೆ. ಯಾವುದೇ ದೇವಸ್ಥಾನಕ್ಕೆ ತೆರಳಿದರೂ ಅಲ್ಲಿರುವ ಗಂಟೆಯನ್ನು ಹೊಡೆಯಲು ಹರಸಾಹಸ ಪಡುವ ಮಕ್ಕಳಿಗೆ ಸೌತಡ್ಕದ ದೇವಸ್ಥಾನದಲ್ಲಿ ಕೈ ಅಳೆತೆಗೆ ಸಿಗುವ ಗಂಟೆಗಳ ಸಾಲನ್ನು ಕಂಡು ಆಗುವ ಸಂತೋಷ ಹೇಳತೀರದು.
ಬೆಂಗಳೂರಿನ ನಾಲ್ಕು ಗೋಡೆಗಳ ನಡುವೆ ಆಡಿಕೊಂಡಿರುವ ಮಗುವನ್ನು ಒಮ್ಮೆಲೆ ಹಳ್ಳಿಯ ಸ್ವಚ್ಛಂದ ಬಯಲಿಗೆ ತಂದುಬಿಟ್ಟಂತೆಯೇ. ಅಪ್ಪ-ಅಮ್ಮನ ಬಿಗಿತದಿಂದ ಸಡಿಲಿಸಿಕೊಂಡು ಓಡಿ ಹೋಗಿ ಕೈಗೆಟುವ ಗಂಟೆಗಳನ್ನು ಹೊಡೆಯುವ ತವಕ. ಯಾವುದೇ ಅಡೆತಡೆಗಳಿಲ್ಲದೆ, ಯಾರ ಭಯವೂ ಇಲ್ಲದೆ ಮನಸ್ಸಿಗೆ ತೃಪ್ತಿಯಾಗುವವರೆಗೂ ಗಂಟೆ ಹೊಡೆಯುವ ಸದಾವಕಾಶವನ್ನು ಎಲ್ಲ ಮಕ್ಕಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳುತ್ತಾರೆ. ತಮ್ಮ ಪುಟಾಣಿ ಕೈಗಳಷ್ಟೇ ಗಾತ್ರದ ಗಂಟೆಗಳಿಂದ ಹಿಡಿದು ದೊಡ್ಡ ಗಂಟೆಗಳನ್ನೂ ಕಷ್ಟಪಟ್ಟು ಬಾರಿಸುತ್ತಾ ಸಂಭ್ರಮಿಸುವ ಮಕ್ಕಳನ್ನು ನೋಡುವುದೇ ಒಂದು ಚೆಂದದ ಅನುಭವ. ಇತರೆ ದೇವಸ್ಥಾನಗಳಲ್ಲಿ ಅಪ್ಪ ಅಮ್ಮಂದಿರಿಗೆ ರಗಳೆ ನೀಡುವ ಮಕ್ಕಳು ಸೌತಡ್ಕದ ಮಹಾಗಣಪತಿ ದೇವಸ್ಥಾನದಲ್ಲಿ ತಮ್ಮ ಪಾಡಿಗೆ ಗಂಟೆಯೊಂದಿಗೆ ಆಟವಾಡಿಕೊಂಡಿರುವುದನ್ನು ನೋಡಿದರೆ ಬಹುಶಃ ದೇವ ಸಮಾನ ಮಕ್ಕಳ ಈ ಆಟ(ಆಟಕ್ಕಿಂತ ಮುಗ್ಧತೆ) ಸವಿಯುವುದಕ್ಕಾಗಿಯೇ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಬೇಗ ಬೇಗನೆ ನೇರವೇರಿಸಿ ಇನ್ನಷ್ಟು ಗಂಟೆಗಳನ್ನು ಗಣಪ ತರಿಸಿಕೊಳ್ಳುತ್ತಾನೇನೋ ಎಂಬ ಭಾವ ಮೂಡುತ್ತದೆ. ಇಲ್ಲಿ ‘ದೇವರ’ ಆಟ ಕಂಡು ಗಣಪ ನಗುತ್ತಾನೆ.
ಎಲ್ಲಿದೆ ಈ ದೇವಸ್ಥಾನ? ಕರಾವಳಿಯ ಪ್ರಮುಖ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಗಳ ನಡುವಿನಲ್ಲಿರುವುದೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿ ೧೩ ಕಿ.ಮೀ ಸಾಗಿದರೆ ಸಿಗುವ ಕೊಕ್ಕಡ ಎಂಬ ಪುಟ್ಟ ಊರಿಗಿಂತ ಒಂದು ಕಿ.ಮೀ ಮೊದಲೇ ಬಲಭಾಗಕ್ಕೆ ತಿರುಗಿ ನಂತರ ಸುಮಾರು ೨.೫ ಕಿ.ಮೀ ದೂರ ಸಾಗಿದರೆ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಿಗುತ್ತದೆ.